24 ಗಂಟೆಗಳೊಳಗೆ ಸಾಲಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್: ಬಿಎಸ್ ವೈ ಎಚ್ಚರಿಕೆ
“ಇನ್ನು ಮುಂದೆ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಲ್ಲ”
ವಿಧಾನಸಭಾ ಕಲಾಪದಿಂದ ಹೊರನಡೆದ ಬಿಜೆಪಿಗರು
ಬೆಂಗಳೂರು, ಮೇ 25: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಇಂದು ಸಂಜೆಯೊಳಗೆ ರೈತರ 53 ಸಾವಿರ ಕೋಟಿ ರೂ. ಸಾಲಮನ್ನಾ ಮಾಡದಿದ್ದರೆ ಮೇ 28ರಂದು ಸೋಮವಾರ ಕರ್ನಾಟಕ ಬಂದ್ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿ, ನಿಮ್ಮ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆಗೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಸಭಾತ್ಯಾಗ ಮಾಡಿ ಹೊರ ನಡೆದರು.
ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡನೆ ಮಾಡಿದ ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮೇಲೆ ಮಾತನಾಡಿದ ಅವರು, 2006ರಲ್ಲಿ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ ಮೈತ್ರಿ ಸರಕಾರ ರಚನೆ ಮಾಡಿದ್ದು, ನನ್ನ ಜೀವನದಲ್ಲಿ ಮಾಡಿದ ದೊಡ್ಡ ಅಪರಾಧ. ಇದಕ್ಕಾಗಿ ರಾಜ್ಯದ ಜನತೆಯ ಕ್ಷಮೆ ಯಾಚಿಸುತ್ತೇನೆ ಎಂದರು.
ಕುಮಾರಸ್ವಾಮಿ ಜೊತೆ ನಡೆಸಿದ ಮೈತ್ರಿ ಸರಕಾರದಲ್ಲಿ 20 ತಿಂಗಳು ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಅವರ ಅಧಿಕಾರವಧಿಯಲ್ಲಿ ಒಂದು ದಿನವೂ ನಾನು ಒಂದು ಪ್ರಶ್ನೆ ಮಾಡಿಲ್ಲ, ಎಲ್ಲದಕ್ಕೂ ಸಹಕಾರ ನೀಡಿದೆ. ಆದರೆ, 20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡುವಾಗ ಅಪ್ಪ-ಮಕ್ಕಳು ಖಾಸಗಿ ಹೊಟೇಲ್‌ನಲ್ಲಿ ನಮ್ಮನ್ನು ಭೇಟಿ ಮಾಡಿ, ಅನೇಕ ಹೊಸ ಷರತ್ತುಗಳನ್ನು ಹಾಕಿದರು ಎಂದು ಅವರು ಆರೋಪಿಸಿದರು.
ನಮ್ಮ ತಂದೆ ಇಷ್ಟ ಇಲ್ಲದಿದ್ದರೂ, ಅವರ ಮಾತಿಗೆ ವಿರುದ್ಧವಾಗಿ ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡಿದೆ. ಅದಕ್ಕಾಗಿ ಈಗ ಪಶ್ಚಾತ್ತಾಪವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಾನು ಅಂದು ನಿಮ್ಮ ಜೊತೆ ಕೈ ಜೋಡಿಸದೆ ಇದ್ದಿದ್ದರೆ ಕುಮಾರಸ್ವಾಮಿ ನೀವು ಎಲ್ಲಿ ಇರುತ್ತಿದ್ದೀರಿ. ನಿಮ್ಮನ್ನು ಯಾರು ಗುರುತಿಸುತ್ತಿದ್ದರು ಎಂದು ಯಡಿಯೂರಪ್ಪ ಹೇಳಿದರು.
20 ತಿಂಗಳು ಅಧಿಕಾರವಧಿ ಪೂರ್ಣಗೊಂಡ ಬಳಿಕ ಯಾರಿಗೆ ಯಾವ ಹುದ್ದೆಗಳು ನೀಡಬೇಕು ಎಂಬುದು ಎರಡು ಪಕ್ಷಗಳ ಮುಖಂಡರ ಎದುರು ಮೊದಲೆ ಚರ್ಚೆ ಆಗಿತ್ತಲ್ಲವೇ? ಆದರೂ ನನಗೆ ನಂಬಿಕೆ ದ್ರೋಹ, ವಿಶ್ವಾಸದ್ರೋಹ ಮಾಡಲಿಲ್ಲವೇ? ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರಂಸಿಂಗ್‌ಗೆ ಕೈ ಕೊಟ್ಟು ನಮ್ಮ ಜೊತೆ ಬಂದ್ರಿ. ಆನಂತರ, ನಮಗೂ ದ್ರೋಹ ಬಗೆದಿರಿ ಇದನ್ನೆಲ್ಲ ನಾಡಿನ ಜನ ನೋಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಿಮ್ಮ ಜೊತೆಯಲ್ಲಿ ಇದ್ದವರಿಗೆ ಕೈ ಕೊಟ್ಟಿದ್ದೀರಾ. ಸಿದ್ದರಾಮಯ್ಯ ವಿರುದ್ಧ ಜಿ.ಟಿ.ದೇವೇಗೌಡರನ್ನು ಚುನಾವಣೆಯಲ್ಲಿ ನಿಲ್ಲಿಸಿ ಸೋಲಿಸುವ ಮೂಲಕ ಅಪಹಾಸ್ಯ ಮಾಡಲಿಲ್ಲವೇ? ಎಂದು ಯಡಿಯೂರಪ್ಪ ಹೇಳುತ್ತಿದ್ದಂತೆ, ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್, ಯಡಿಯೂರಪ್ಪರನ್ನು ಧರ್ಮಕ್ಕೆ ಇಲ್ಲಿ ಕೂರಿಸಲಿಲ್ಲ. ಸಂವಿಧಾನಬದ್ಧವಾಗಿ ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. ಅವರ ಮಾತನ್ನು ಕೇಳಿ ಎಂದು ಆಡಳಿತ ಪಕ್ಷದ ಸದಸ್ಯರ ಬಾಯಿ ಮುಚ್ಚಿಸಿದರು.
ಈ ವೇಳೆ ತಮ್ಮ ಮಾತು ಮುಂದುವರೆಸಿದ ಯಡಿಯೂರಪ್ಪ, ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ರನ್ನು ಉದ್ದೇಶಿಸಿ ನೀವು ಯಾರೂ ಮಾಡದ ಅಪರಾಧವನ್ನು ಮಾಡಿದ್ದೀರಾ. ದ್ರೋಹ ಮಾಡಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಸಹಕಾರ ನೀಡಿದ್ದೀರಾ. ನಮ್ಮ ಸರಕಾರ ರಚನೆ ಮಾಡಲು ಆಡಳಿತ ಪಕ್ಷದಲ್ಲಿರುವ ಶಾಸಕರನ್ನು ಸಂಪರ್ಕಿಸಿ ಮನವಿ ಮಾಡಿದ್ದು ನಿಜ. ಆದರೆ, ಕುಮಾರಸ್ವಾಮಿಯವರ ಮುಳುಗುವ ದೋಣಿಯಲ್ಲಿ ನೀವು ಮುಳುಗಲು ಮುಂದಾದರೆ ನನ್ನ ಅಭ್ಯಂತರವೇನಿಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯರನ್ನು ಹೊಗಳಿ ಲಾಭ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮಗೆ ಮನ್ನಣೆ ನೀಡಲಾಗುತ್ತಿತ್ತು. ಆದರೆ, ಈ ಸಮ್ಮಿಶ್ರ ಸರಕಾರ ರಚನೆ ಕುರಿತು ಚರ್ಚಿಸಲು ಕುಮಾರಸ್ವಾಮಿಯನ್ನು ದಿಲ್ಲಿಗೆ ಕರೆಸುವ ಕಾಂಗ್ರೆಸ್ ಹೈಕಮಾಂಡ್ ನಿಮ್ಮನ್ನು ಕಡೆಗಣಿಸಿದ್ದು ಸರಿಯಲ್ಲ ಎಂದು ಯಡಿಯೂರಪ್ಪ ಕಿಚಾಯಿಸಿದರು.
ಈ ಸರಕಾರ ಐದು ವರ್ಷ ಪೂರ್ಣಗೊಳಿಸಲಿ ನಮಗೆ ಬೇಸರವಿಲ್ಲ. ನಮಗೆ ಪ್ರತಿಪಕ್ಷ ಸ್ಥಾನ ನೀಡಿದ್ದು, ಅದನ್ನು ನಿರ್ವಹಿಸುತ್ತೇವೆ. ಆದರೆ, ಮುಖ್ಯಮಂತ್ರಿ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಠಾಧೀಶರಿಗೆ ಅಪಮಾನವಾಗುವ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದರು. ಕೂಡಲೆ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಯಡಿಯೂರಪ್ಪ, 'ಅಣ್ಣ.......ಸಿದ್ದರಾಮಣ್ಣ ನೀವು ಮುಖ್ಯಮಂತ್ರಿ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ'. ನಿಮ್ಮ ಸ್ಥಾನಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕು ಎಂದು ಹಾಸ್ಯಚಟಾಕಿ ಹಾರಿಸಿದರು.
ಭಾಷಣದುದ್ದಕ್ಕೂ ಸಿದ್ದರಾಮಯ್ಯರನ್ನು ಹೊಗಳಿದ ಬಿಎಸ್ ವೈ, ಇನ್ನು ಮುಂದೆ ನಾನು ಸಾರ್ವಜನಿಕ ಸಭೆಗಳಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುವುದಿಲ್ಲ. ನಮ್ಮ ಹೋರಾಟ ಅಧಿಕಾರದ ಆಸೆಯಿರುವ ತಂದೆ-ಮಗನ ವಿರುದ್ಧ ಮಾತ್ರ ಎಂದರು.
ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಸರಕಾರವು 24 ಗಂಟೆಗಳೊಳಗೆ ಸಾಲಮನ್ನಾ ಮಾಡಬೇಕು. ಇಲ್ಲದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡಿಸುತ್ತೇನೆ ಎಂದ ಅವರು, ವಿಧಾನಸಭಾ ಕಲಾಪದಿಂದ ಬಿಜೆಪಿ ಹೊರನಡೆಯುವುದಾಗಿ ತಿಳಿಸಿದರು. ನಂತರ ಬಿಎಸ್ ವೈ ಜೊತೆ ಬಿಜೆಪಿ ಶಾಸಕರು ಕಲಾಪದಿಂದ ಹೊರನಡೆದರು.