ಭ್ರಷ್ಟಾಚಾರ ಕಡಿವಾಣಕ್ಕೆ ಯುವಪೀಳಿಗೆ ಮುಂದಾಗಲಿ: ಸಂತೋಷ್ ಹೆಗ್ಡೆ

Update: 2018-05-25 12:56 GMT

ಬೆಂಗಳೂರು, ಮೇ 25: ಸಮಾಜದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಯುವಪೀಳಿಗೆ ಮುಂದಾಗಬೇಕೆಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದರು.

ಶುಕ್ರವಾರ ನಗರದ ಕೃಷಿವಿಜ್ಞಾನ ವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಸಭಾಂಗಣದಲ್ಲಿ ಔಟ್‌ರೀಚ್ ಸಂಸ್ಥೆಯ 25ನೇ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಗ್ರಾಮೀಣಾಭಿವೃದ್ಧಿ ಬಹು ಆಯಾಮದ ದೃಷ್ಟಿಕೋನ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಂಕಲ್ಪ ತೊಟ್ಟಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ನಮ್ಮ ಸಮಾಜದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲದಂತಾಗಿದೆ. ಅತ್ಯಾಚಾರಿಗಳಿಗೆ, ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸ್ವಾಗತಿಸುವ ಸಮಾಜದಲ್ಲಿ ನಾವಿದ್ದೇವೆ ಇದು ವ್ಯವಸ್ಥೆಯ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಎಲ್ಲರೂ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದುಕೊಂಡಿದ್ದೆ. ಆದರೆ, ಲೋಕಾಯುಕ್ತನಾದ ಮೇಲೆ ಸಮಾಜದ ಇನ್ನೊಂದು ಮುಖ ಕಂಡೆ. ನಂತರ ಇಂತಹ ಭ್ರಷ್ಟಾಚಾರ ತುಂಬಿದ ಸಮಾಜದಲ್ಲಿ ನಾವಿದ್ದೇವೆ ಎನ್ನುವ ಸತ್ಯ ತಿಳಿಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರೈತರು ಕೃಷಿಗೆ ಹೂಡಿದ ಬಂಡವಾಳಕ್ಕೆ ಪ್ರತಿಫಲವಾಗಿ ಆದಾಯ ಪಡೆಯಬೇಕು. ಅದಕ್ಕಾಗಿ ಸಹಾಯ ಸಹಕಾರ ಅಗತ್ಯವಿದ್ದರೆ, ಔಟ್‌ರೀಚ್ ಸಂಸ್ಥೆಯ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದ ಅವರು, ರೈತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಔಟ್‌ರೀಚ್ ಸಂಸ್ಥೆ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದಲ್ಲಿ ಮುಂದು ಬರಲು ತೃಪ್ತಿ ಮತ್ತು ಮಹತ್ವಾಕಾಂಕ್ಷೆ ಇರಬೇಕು. ಹಣ ಗಳಿಸುವುದು ತಪ್ಪಲ್ಲ. ಆದರೆ, ಅನ್ಯಾಯ, ಅಕ್ರಮ ಮಾಡಿ ಹಣ ಗಳಿಸಬಾರದು. ಪ್ರಾಮಾಣಿಕತೆಯಿಂದ ಹಣಗಳಿಸಿ ಸಮಾಜದಲ್ಲಿ ಸ್ಥಾನಮಾನ ಗಳಿಸಬೇಕೆಂದು ಹೇಳಿದರು.

ಈ ವೇಳೆ ಔಟ್‌ರೀಚ್ ಸಂಸ್ಥೆಯಿಂದ ಸಹಾಯ ಪಡೆದು ಸ್ವಯಂ ಉದ್ಯೋಗ ಆರಂಭಿಸಿ ಯಶಸ್ವಿಯಾದ ರಾಜ್ಯದ ವಿವಿಧ ಜಿಲ್ಲೆಗಳ ಐವರು ಸಾಧಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಔಟ್‌ರೀಚ್ ಸಂಸ್ಥೆ ಮುಖ್ಯಸ್ಥೆ ಡಾ.ನಂದಿತಾ ರೇ, ನಿವೃತ್ತ ಐಎಎಸ್ ಅಧಿಕಾರಿ ಜೆ.ಕೆ.ಅರೋರಾ, ವಿಜಯ್ ಮಹಾನ್, ಎನ್.ಡಿ.ತಿವಾರಿ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News