×
Ad

ಉತ್ತಮ ಆಡಳಿತ ಸೇವೆಗೆ ಶಿಸ್ತುಬದ್ಧತೆ ಅಗತ್ಯ: ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ

Update: 2018-05-26 18:12 IST

ಬೆಂಗಳೂರು, ಮೇ 26: ‘ಮಧ್ಯಾಹ್ನದ ಊಟಕ್ಕೆ ಹೋದರೆ ಬರುವುದು ವಿಳಂಬ. ಬಂದರೂ ನಾಲ್ಕೂವರೆಗೆ ಹೊರಡಲು ಸಿದ್ಧರಾಗುವಂತಹ ಸಂಪ್ರದಾಯ ಸಲ್ಲ. ಜನರಿಗೆ ಉತ್ತಮ ಆಡಳಿತ ಸೇವೆ ಒದಗಿಸಲು ನೌಕರರು ಶಿಸ್ತುಬದ್ಧತೆ ರೂಢಿಸಿಕೊಳ್ಳಿ’ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸಲಹೆ ಮಾಡಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸರಕಾರಿ ಸಚಿವಾಲಯ ಪತ್ರಾಂಕಿತ ಅಧಿಕಾರಿಗಳ ಸಂಘದ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಮಸ್ಯೆಗಳ ಇತ್ಯರ್ಥ ಸಂಬಂಧ ಸಾಮಾನ್ಯ ಜನ ಸಲ್ಲಿಸುವ ಅರ್ಜಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಸೂಚಿಸಿದರು.

ಅರ್ಜಿಗಳಿಗೆ ಪರಿಹಾರ ಕಲ್ಪಿಸುವ ಬದಲಿಗೆ ಕ್ಷುಲ್ಲಕ ಕಾರಣಕ್ಕೆ ಮೇಲಾಧಿಕಾರಿಗೆ ಸಲ್ಲಿಸುವ ಪ್ರವೃತ್ತಿ, ವಿಳಂಬ ನೀತಿ ಸರಿಯಲ್ಲ ಎಂದ ಅವರು, ಕಡತಗಳನ್ನು ಸೂಕ್ತ ರೀತಿ ವಿಲೇವಾರಿ ಮಾಡದೆ ಮೇಲಾಧಿಕಾರಿಗಳಿಗೆ ಕಳುಹಿಸುವುದೇ ಕಡತಗಳ ಇತ್ಯರ್ಥವೆಂದು ಭಾವಿಸಬೇಡಿ ಎಂದರು.

ಮೊಬೈಲ್‌ಫೋನ್ ಬಳಕೆಯಿಂದ ನೌಕರರ ಕರ್ತವ್ಯಕ್ಕೆ ಮತ್ತೊಂದು ಅಡ್ಡಿಯಾಗಿದ್ದು, ಈ ಬಗ್ಗೆಯೂ ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು ಎಂದ ಅವರು, ಸರಕಾರಿ ಉದ್ಯೋಗ ಸಿಗುವುದು ಕಷ್ಟ. ಉತ್ತರ ಪ್ರದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದವರು ಪೊಲೀಸ್ ಕಾನ್ಸ್‌ಸ್ಟೇಬಲ್ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಎಚ್ಚರಿಸಿದರು.

ಭರವಸೆ ಈಡೇರಿಸಲು ಸಿದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸಚಿವಾಲಯ ಪತ್ರಾಂಕಿತ ನೌಕರರು ಮತ್ತು ಅಧಿಕಾರಿಗಳ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ರತ್ನಪ್ರಭಾ ತಿಳಿಸಿದರು.

ಜನರ ದುರಾದೃಷ್ಟ ಆಗಬಾರದು: ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಸರಕಾರಿ ಉದ್ಯೋಗ ಸಿಕ್ಕಿರುವುದು ಸೌಭಾಗ್ಯ. ಆದರೆ, ಅದು ಜನ ಸಾಮಾನ್ಯರ ಪಾಲಿಗೆ ಎಂದೂ ದುರಾದೃಷ್ಟ ಆಗದಂತೆ ಎಚ್ಚರ ವಹಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದರು.

ಕಚೇರಿ ನಮ್ಮ ಎರಡನೆ ಮನೆ. ಹೀಗಾಗಿ ಸ್ವಂತ ಮನೆಗೆ ನೀಡುವಷ್ಟು ಆದ್ಯತೆಯನ್ನು ಈ ಮನೆಗೂ ನೀಡಬೇಕು. ಮನೆಯ ಸಮಸ್ಯೆಗಳಿಗೆ ವಹಿಸುವಷ್ಟು ಕಾಳಜಿ- ಕಳಕಳಿಯನ್ನು ಜನರ ಸಮಸ್ಯೆಗಳಿಗೆ ವಹಿಸಬೇಕೆಂದು ಶಾಲಿನಿ ರಜನೀಶ್ ಸಿಬ್ಬಂದಿಗೆ ಸೂಚಿಸಿದರು.

ಸಮಾರಂಭದಲ್ಲಿ ಇದೇ ತಿಂಗಳ ನಿವೃತ್ತಿಯಾಗಲಿರುವ ಸಂಘದ ಅಧ್ಯಕ್ಷ ಎಸ್.ಎನ್. ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಎಚ್.ಕೆ. ರಾಮು, ಉಪಾಧ್ಯಕ್ಷೆ ಡಾ.ಗೀತಾ, ಪದಾಧಿಕಾರಿಗಳಾದ ನಾಗರಾಜ್, ಕುಮಾರ್, ದಿನೇಶ್ ಸಂಪತ್‌ರಾಜ್, ಜಾನ್ಸ್‌ನ್ ಆಂಥೋಣಿ, ಕೃಷ್ಣಮೂರ್ತಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News