ಬೆಂಗಳೂರು ವಿವಿ ದೂರ ಶಿಕ್ಷಣಕ್ಕೆ ಯುಜಿಸಿ ಮಾನ್ಯತೆ
ಬೆಂಗಳೂರು, ಮೇ 26: ಬೆಂಗಳೂರು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ ಮಾನ್ಯತೆಗೆ ಇದ್ದ ತೊಡಕುಗಳು ದೂರವಾಗಿದೆ. ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್(ನ್ಯಾಕ್) ರೂಪಿಸಿರುವ ನಿಯಮದಲ್ಲಿ ಬದಲಾವಣೆಯಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರವೇಶ ಕಲ್ಪಿಸಲು ಧನ ಸಹಾಯ ಆಯೋಗ(ಯುಜಿಸಿ) ಒಪ್ಪಿಕೊಂಡಿದೆ.
ಈ ಹಿಂದೆ ಯುಜಿಸಿ ಎರಡು ವರ್ಷಗಳಿಗೆ ಮಾತ್ರವೆ ಮಾನ್ಯತೆ ನೀಡಿತ್ತು. 2018-19ನೆ ಸಾಲಿನ ಪ್ರವೇಶಕ್ಕೆ ಮರು ಮಾನ್ಯತೆ ಪಡೆಯಬೇಕಿತ್ತು. ಮಾನ್ಯತೆಗೆ ಕನಿಷ್ಟ 3.26ನ್ಯಾಕ್ ಸ್ಕೋರ್ ಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ಸ್ಕೋರ್3.16ಇತ್ತು. ಈ ಸ್ಕೋರ್ ಬದಲು ನ್ಯಾಕ್ ನೀಡುವ ‘ಎ’ ಶ್ರೇಣಿ ಪರಿಗಣಿಸುವಂತೆ ಕೇಂದ್ರ ವಿಶ್ವವಿದ್ಯಾಲಯ ಕುಲಾಧಿಪತಿ ಎನ್.ಆರ್.ಶೆಟ್ಟಿ ಮತ್ತು ವಿಷಯ ತಜ್ಞರಿದ್ದ ನಿಯೋಗ ದೆಹಲಿಗೆ ಹೋಗಿ ಯುಜಿಸಿಗೆ ಮನವಿ ಮಾಡಿತ್ತು.
ನ್ಯಾಕ್‌ನಿಂದ ‘ಎ’ ಶ್ರೇಣಿ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯಗಳಿಗೆ ದೂರ ಶಿಕ್ಷಣ ಪ್ರವೇಶ ಕಲ್ಪಿಸಲು ಮಾನ್ಯತೆ ನೀಡಬಹುದು ಎಂದು ಯುಜಿಸಿ ನಿಯಮದಲ್ಲಿ ತಿದ್ದುಪಡಿ ತಂದಿದೆ. ಆ ಪ್ರಕಾರವಾಗಿ ಬೆಂಗಳೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯ ‘ಎ’ ಮಾನ್ಯತೆ ಹೊಂದಿರುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಕಲ್ಪಿಸಲು ಮಾನ್ಯತೆ ನೀಡುವುದಾಗಿ ನಡಾವಳಿ ರೂಪಿಸಿದ್ದು, ಯುಜಿಸಿ ವೆಬ್ ಸೈಟ್‌ನಲ್ಲೂ ಅಪ್‌ಲೋಡ್ ಆಗಲಿದೆ.
ಯುಜಿಸಿ ಕಳೆದ ಫೆಬ್ರವರಿಯಲ್ಲಿ ಸಾರ್ವಜನಿಕ ಸುತ್ತೋಲೆ ಹೊರಡಿಸುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳು ಕನಿಷ್ಟ ಸಿಜಿಪಿಎ 3.26 ಹೊಂದಿರಬೇಕು. ಮುಕ್ತ ವಿಶ್ವವಿದ್ಯಾಲಯ ತನ್ನ ಶೈಕ್ಷಣಿಕ ಕಾರ್ಯ ಪ್ರಾರಂಭಿಸಬೇಕಾದಲ್ಲಿ ನ್ಯಾಕ್‌ನಿಂದ ಮಾನ್ಯತೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಬೆಂಗಳೂರು ವಿವಿ ದೂರ ಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಸಿಗುತ್ತೋ ಇಲ್ಲವೋ ಎಂಬ ಗೊಂದಲ ಇತ್ತು. ಆದರೆ, ಇದೀಗ ಯುಜಿಸಿಯಿಂದ ಹಸಿರು ನಿಶಾನೆ ಸಿಕ್ಕಿದೆ. ಶೀಘ್ರದಲ್ಲಿಯೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಬೆಂಗಳೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಬಿ.ಸಿ.ಮೈಲಾರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.