×
Ad

ಪರಿಶಿಷ್ಟ ಮತದಾರರು ಬಿಜೆಪಿ ಪರ: ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್.ವೀರಯ್ಯ

Update: 2018-05-26 18:21 IST

ಬೆಂಗಳೂರು, ಮೇ 26: ಇತ್ತೀಚೆಗೆ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 36 ಎಸ್ಸಿ ಮೀಸಲು ಕ್ಷೇತ್ರದಲ್ಲಿ ಬಿಜಪಿಯ 16 ಅಭ್ಯರ್ಥಿಗಳು ಆರಿಸಿಬಂದಿರುವುದು ಪರಿಶಿಷ್ಟ ಜಾತಿಯ ಮತದಾರರು ಬಿಜೆಪಿ ಪರವಾಗಿದ್ದಾರೆ ಎಂಬುದನ್ನು ಸಾಬೀತು ಪಡಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಡಿ.ಎಸ್.ವೀರಯ್ಯ ತಿಳಿಸಿದ್ದಾರೆ.

ಕಾಂಗ್ರೆಸ್ ಎಸ್ಸಿ ಮೀಸಲು ಕ್ಷೇತ್ರದಲ್ಲಿ 12, ಜೆಡಿಎಸ್ 7, ಬಿಎಸ್ಪಿ 1 ಆಯ್ಕೆಯಾಗಿರುವುದು ಪರಿಶಿಷ್ಟ ಜಾತಿಯವರು ಆ ಎರಡೂ ಪಕ್ಷಗಳ ನಿರೀಕ್ಷಿಸಿದ ಫಲಿತಾಂಶಕ್ಕೆ ವಿರುದ್ಧವಾಗಿ ಬಂದಿರುವುದು ಪರಿಶಿಷ್ಟರು ಬೆಂಬಲ ಇಲ್ಲ ಎಂಬುದು ಸಾಕ್ಷಿಯಾಗಿದೆ. ಪರಿಶಿಷ್ಟ ಪಂಗಡದವರಲ್ಲಿ 9 ಮಂದಿ ಆಯ್ಕೆಯಾಗಿ ಬಂದಿರುವುದು ಪರಿಶಿಷ್ಟ ಪಂಗಡದವರೂ ಬಿಜೆಪಿ ಪರವಾಗಿದ್ದಾರೆ ಎಂಬುದನ್ನು ಸ್ಪಷ್ಟಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ಸಿಗರು ಬಿಜೆಪಿ ಕೋಮುವಾದಿ ಪಕ್ಷ, ಅಧಿಕಾರಕ್ಕೆ ಬಂದರೆ ಮೀಸಲಾತಿ ಕಿತ್ತು ಹಾಕುತ್ತದೆ, ಸಂವಿಧಾನ ಬದಲಾಯಿಸುತ್ತಾರೆ ಎಂಬ ಅಪಪ್ರಚಾರವನ್ನು ಈ ವರ್ಗ ಸಂಪೂರ್ಣವಾಗಿ ತಿರಸ್ಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡುವ ಮೂಲಕ ಅವರ ಬೊಗಳೆ ಮಾತುಗಳಿಗೆ ತಕ್ಕ ಪಾಠ ಕಲಿಸಿದೆ ಎಂದು ವೀರಯ್ಯ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಈ ವರ್ಗಕ್ಕೆ ಮೀಸಲಿಟ್ಟ ಅನುದಾನವನ್ನು ಸಂಪೂರ್ಣ ಬಳಕೆ ಮಾಡದಿರುವುದು ಹಾಗೂ ಭಡ್ತಿ ಮೀಸಲಾತಿಯನ್ನು ರಕ್ಷಿಸದಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ನರೇಂದ್ರಮೋದಿ ಸರಕಾರದ ದಲಿತ ಪರ ಯೋಜನೆಗಳು, ಡಾ.ಅಂಬೇಡ್ಕರ್‌ಗೆ ನೀಡುತ್ತಿರುವ ಗೌರವ ಹಾಗೂ ರಾಜ್ಯದಲ್ಲಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸರಕಾರ ಕೊಟ್ಟ ಪರಿಶಿಷ್ಟರ ಪರ ಕಾರ್ಯಕ್ರಮಗಳು ಪರಿಶಿಷ್ಟರು ಇಂದು ಬಿಜೆಪಿ ಪರವಾಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬರುವ ಚುನಾವಣೆಗಳಲ್ಲಿ, ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರ ಹಾಗೂ ಜಯನಗರ ಮತ್ತು ರಾಜರಾಜೇಶ್ವರಿ ನಗರದ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿಯ ಅಲೆ ಇದೆ. ಪರಿಶಿಷ್ಟ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದು, ಈ ಎಲ್ಲ ಚುನಾವಣೆಯಲ್ಲಿಯೂ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ವೀರಯ್ಯ ಪ್ರಕಟನೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News