ರಜನಿಕಾಂತ್ 'ಕಾಲ' ಚಿತ್ರ ನಿರ್ಬಂಧಿಸಲು ವಾಟಾಳ್ ಆಗ್ರಹ

Update: 2018-05-26 13:00 GMT

ಬೆಂಗಳೂರು, ಮೇ 26: ತಮಿಳು ನಟ ರಜನಿಕಾಂತ್ ನಟಿಸಿರುವ 'ಕಾಲ' ಚಲನಚಿತ್ರವನ್ನು ರಾಜ್ಯದ ಯಾವುದೇ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯ ಮೂಲದ ಕಾವೇರಿ ನೀರು ನಮ್ಮ ಆಸ್ತಿಯಾಗಿದೆ. ಆದರೆ, ರಜನಿಕಾಂತ್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಹೇಳಿಕೆ ನೀಡುವ ಮೂಲಕ ಕನ್ನಡ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಒಂದು ವೇಳೆ ನಿರ್ವಹಣಾ ಮಂಡಳಿ ರಚನೆಯಾದರೆ, ಕಬಿನಿ, ಹಾರಂಗಿ, ಕೆಆರ್‌ಎಸ್ ಎಲ್ಲ ಜಲಾಶಯಗಳ ನೀರು ಪಡೆಯಲು ಮಂಡಳಿ ಎದುರು ಕೈ ಮುಗಿದು ನಿಂತುಕೊಳ್ಳಬೇಕಾಗುತ್ತದೆ. ಆದುದರಿಂದಾಗಿ ಕನ್ನಡ ದ್ರೋಹಿ ರಜನಿಕಾಂತ್ ಚಿತ್ರವನ್ನು ಪ್ರತಿಯೊಬ್ಬರೂ ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ನಾಯಕರುಗಳಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಇತ್ತೀಚಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಟ ಕಮಲಹಾಸನ್‌ರನ್ನು ಕರೆಸಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ಬೇಕು ಎನ್ನುವವರನ್ನು ಕರೆಸಿ ವೇದಿಕೆ ಹಂಚಿಕೊಂಡಿದ್ದಾರೆ. ಇವರಿಗೆ ಮಾನ-ಮರ್ಯಾದೆಯಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ತಲಾ ಒಂದೊಂದು ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಇಂದು(ಮೇ 27) ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಮ್ಮಿಶ್ರ ಸರಕಾರ ಬಹುಮತ ಸಾಬೀತು ಮಾಡಿದ್ದು, ಸಚಿವ ಸಂಪುಟ ರಚನೆಯಾಗಿಲ್ಲ. ಆದರೆ, ಹೈದರಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕವನ್ನು ಈ ಸರಕಾರ ಕಡೆಗಣಿಸುತ್ತಿರುವುದು ಸರಿಯಲ್ಲ. ಹೀಗಾಗಿ, ಈ ಭಾಗಗಳಿಗೆ ತಲಾ ಒಬ್ಬರನ್ನು ಡಿಸಿಎಂ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News