ಸಾಲು ಮರದ ತಿಮ್ಮಕ್ಕ ಸಾವು ಸುಳ್ಳು ವದಂತಿ: ತಪ್ಪಿತಸ್ಥರ ವಿರುದ್ಧ ಸಿಸಿಬಿ ಮೊಕದ್ದಮೆ
ಬೆಂಗಳೂರು, ಮೇ 26: ಸಾಲು ಮರದ ತಿಮ್ಮಕ್ಕ ಮೃತಪಟ್ಟಿದ್ದಾರೆ ಎಂದು ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಬ್ಬಿಸುವವರ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಸಾಲು ಮರದ ತಿಮ್ಮಕ್ಕ ಅವರ ಪುತ್ರ ಉಮೇಶ್ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಯಾವುದೇ ಆಧಾರವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ ಎಂದು ವದಂತಿ ಹಬ್ಬಿಸಿರುವುದಲ್ಲದೆ, ಬೇರೆ ವೃದ್ಧೆಯ ಫೋಟೋ ಹಾಕಿ ವೈರಲ್ ಮಾಡಲಾಗಿದೆ.
ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಸುಳ್ಳು ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದವರನ್ನು ಪತ್ತೆ ಹಚ್ಚಿ ಕೂಲಂಕಷ ವಿಚಾರಣೆಗೊಳಪಡಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಸಿಬಿ ತಿಳಿಸಿದೆ.
ಉದ್ದೇಶಪೂರ್ವಕವಾಗಿಯೇ, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಲೈಕ್, ಅಭಿಪ್ರಾಯ ಹಂಚಿಕೊಳ್ಳುವವರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.