ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ಆರೋಪ: ಸಮಗ್ರ ತನಿಖೆಗೆ ಐಸಿಸಿ ಸಿದ್ಧತೆ

Update: 2018-05-26 18:40 GMT

ಹೊಸದಿಲ್ಲಿ, ಮೇ 26: ಸುದ್ದಿ ಸಂಸ್ಥೆ ಅಲ್ ಜಝೀರಾದಲ್ಲಿ ರವಿವಾರ ಪ್ರಸಾರವಾಗಲಿರುವ ಕಿರುಚಿತ್ರದಲ್ಲಿ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಆ ಕುರಿತು ತನಿಖೆ ನಡೆಸಲು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮುಂದಾಗಿದೆ.

   ಮೈದಾನದ ಸಿಬ್ಬಂದಿ ಲಂಚ ಪಡೆದು ವಿಶ್ವದ ಕೆಲವು ಅಗ್ರ ತಂಡಗಳ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಪಿಚ್ ಬದಲಿಸಲು ಒಪ್ಪಿಕೊಂಡಿದ್ದಾರೆ ಎಂದು ಸಾಕ್ಷಚಿತ್ರದಲ್ಲಿ ಆರೋಪಿಸಲಾ ಗಿದೆ. ‘‘ಸುದ್ದಿ ಸಂಸ್ಥೆಯೊಂದು ಕ್ರಿಕೆಟ್ ಕುರಿತು ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸಲು ಸಿದ್ಧತೆ ನಡೆಸಿದ್ದು, ನಾವು ಕಿರುಚಿತ್ರದ ಎಲ್ಲ ಅಂಶಗಳನ್ನು ಪಡೆಯಲಿದ್ದೇವೆ. ಯಾವುದೇ ಆರೋಪವೂ ಗಂಭೀರವಾಗಿರುತ್ತದೆ. ನಮಗೆ ಲಭಿಸಿರುವ ಸೀಮಿತ ಮಾಹಿತಿಯ ಆಧಾರದಲ್ಲಿ ಸದಸ್ಯ ರಾಷ್ಟ್ರಗಳ ಭ್ರಷ್ಟಾಚಾರ ನಿಗ್ರಹ ಘಟಕದೊಂದಿಗೆ ತನಿಖೆಯನ್ನು ಆರಂಭಿಸಿದ್ದೇವೆ. ಪೂರ್ಣ ಹಾಗೂ ಸಮಗ್ರ ತನಿಖೆ ಕೈಗೆತ್ತಿಕೊಳ್ಳಲು ಕ್ರಿಕೆಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರವನ್ನು ಬೆಂಬಲಿಸುವ ಅಂಶಗಳನ್ನು ಬಿಡುಗಡೆ ಮಾಡುವಂತೆಯೂ ನಾವು ಹಲವು ಬಾರಿ ವಿನಂತಿಸಿದ್ದೇವೆ’’ ಎಂದು ಐಸಿಸಿ ತಿಳಿಸಿದೆ.

  2016ರಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಆಸ್ಟ್ರೇಲಿಯ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಿಚ್‌ನ್ನು ಬ್ಯಾಟ್ಸ್ ಮನ್ ಅಥವಾ ಬೌಲರ್‌ಗಳಿಗೆ ಒಪ್ಪುವಂತೆ ಸಿದ್ಧಪಡಿಸಲು ಗಾಲೆ ಮೈದಾನದ ಅಸಿಸ್ಟೆಂಟ್ ಮ್ಯಾನೇಜರ್‌ಗೆ ಮ್ಯಾಚ್ ಫಿಕ್ಸರ್ ಲಂಚ ನೀಡಿದ್ದಾರೆ ಎಂದು ಸಾಕ್ಷಚಿತ್ರದಲ್ಲಿ ಆರೋಪಿಸಲಾಗಿದೆ ಎಂದು ಆಸ್ಟ್ರೇಲಿಯದ ದಿನಪತ್ರಿಕೆ ‘ದಿ ಆಸ್ಟ್ರೇಲಿಯನ್’ಶನಿವಾರ ವರದಿ ಮಾಡಿದೆ.

ಗಾಲೆ ಸ್ಟೇಡಿಯಂನ ಅಸಿಸ್ಟೆಂಟ್ ಮ್ಯಾನೇಜರ್ ತರಂಗ ಇಂಡಿಕ ಪಿಚ್‌ಗಳನ್ನು ದಾಂಡಿಗರು ಅಥವಾ ಬೌಲರ್‌ಗಳ ಫೇವರ್ ಆಗಿ ಸಿದ್ಧಪಡಿಸಲು ಸಿದ್ಧ ಎಂದು ಹೇಳಿದ್ದಾರೆ. ಒಂದು ವೇಳೆ ನೀವು ಸ್ಪಿನ್ ಬೌಲಿಂಗ್ ಅಥವಾ ವೇಗದ ಬೌಲಿಂಗ್ ಅಥವಾ ಬ್ಯಾಟಿಂಗ್‌ಗೆ ಫೇವರ್ ಆಗಿರಬೇಕೆಂದು ಬಯಸಿದರೆ ಅದೇ ರೀತಿ ಪಿಚ್ ಸಿದ್ಧಪಡಿಸಲಾಗುವುದು ಎಂದು ತರಂಗ ಹೇಳಿದ್ದಾಗಿ ಚಾನಲ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. 2016ರ ಗಾಲೆ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯ ತಂಡ ಎರಡೂ ಇನಿಂಗ್ಸ್‌ನಲ್ಲಿ 106 ಹಾಗೂ 183 ರನ್‌ಗೆ ಆಲೌಟಾಗಿತ್ತು. ಮೂರು ದಿನಗಳೊಳಗೆ 229 ರನ್‌ಗಳಿಂದ ಸೋತಿತ್ತು.

ಕಳೆದ ವರ್ಷ ಭಾರತ ಹಾಗೂ ಶ್ರೀಲಂಕಾದ ನಡುವೆ ಗಾಲೆಯಲ್ಲಿ ನಡೆದಿರುವ ಟೆಸ್ಟ್ ಪಂದ್ಯವೂ ಶಂಕಾಸ್ಪದವಾಗಿದೆ. ನವೆಂಬರ್‌ನಲ್ಲಿ ಇದೇ ಮೈದಾನದಲ್ಲಿ ನಡೆದ ಇಂಗ್ಲೆಂಡ್-ಶ್ರೀಲಂಕಾ ನಡುವಿನ ಪಂದ್ಯಕ್ಕೆ ಮ್ಯಾಚ್ ಫಿಕ್ಸರ್‌ಗಳು ಕಣ್ಣಿಟ್ಟಿದ್ದರು ಎಂದು ‘ದಿ ಆಸ್ಟ್ರೇಲಿಯನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News