ಕಾಂಗ್ರೆಸ್ ಕನಿಷ್ಠ ಮೂವರು ಮುಸ್ಲಿಮರಿಗೆ ಪ್ರಮುಖ ಸಚಿವ ಸ್ಥಾನ ನೀಡಲಿ

Update: 2018-05-27 04:52 GMT

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರದ ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ವಿವಿಧ ಸಮುದಾಯಗಳಿಂದ ಪ್ರಾತಿನಿಧ್ಯಕ್ಕಾಗಿ ಬೇಡಿಕೆಗಳು ಬರುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಹಜ. ಆಡಳಿತದಲ್ಲಿ, ಅಭಿವೃದ್ಧಿಯಲ್ಲಿ ಪ್ರತಿ ಸಮುದಾಯಕ್ಕೆ ಅದರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಸಿಗಬೇಕಾದ್ದು ನ್ಯಾಯ ಕೂಡ. ಹಾಗಾಗಿ ತಮ್ಮ ಸಮುದಾಯಕ್ಕೆ ಇಂತಹ ಅಥವಾ ಇಷ್ಟು ಸ್ಥಾನ ಕೊಡಿ ಎಂದು ಕೇಳುವ ಹಕ್ಕು ಪ್ರತಿ ಸಮುದಾಯಕ್ಕಿದೆ. 

ಈಗ ಅತ್ಯಂತ  ಹೆಚ್ಚು ಚರ್ಚೆಯಾಗುತ್ತಿರುವುದು ಲಿಂಗಾಯತರಿಗೆ ಮತ್ತು ಒಕ್ಕಲಿಗರಿಗೆ ( ಡಿ.ಕೆ.ಶಿವಕುಮಾರ್ ) ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬುದು. ಲಿಂಗಾಯತರು ಈ ಬಗ್ಗೆ ದೊಡ್ಡ ಮಟ್ಟದಲ್ಲೇ ಲಾಬಿ ನಡೆಸುತ್ತಿದ್ದಾರೆ. ಆದರೆ ಆಶ್ಚರ್ಯದ ವಿಷಯವೇನೆಂದರೆ ಮುಸ್ಲಿಂ ಸಮುದಾಯಕ್ಕೆ ಸಿಗಬೇಕಾದ ಪ್ರಾತಿನಿಧ್ಯದ ಬಗ್ಗೆ ಎಲ್ಲಿಯೂ ಗಮನಾರ್ಹ ಚರ್ಚೆಯಾಗಲಿ, ಲಾಬಿಯಾಗಲಿ ನಡೆಯುವುದು ಕಂಡುಬರುತ್ತಿಲ್ಲ. ಕೆಲವು ಮುಸ್ಲಿಂ ಶಾಸಕರು ತಮಗೆ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತಿರುವುದನ್ನು ಬಿಟ್ಟರೆ ಒಂದು ಸಮುದಾಯವಾಗಿ ಮುಸ್ಲಿಮರಿಗೆ ಅವರ ನ್ಯಾಯಯುತ ಪ್ರಾತಿನಿಧ್ಯ ಈ ಸರಕಾರದಲ್ಲಿ ಸಿಗಬೇಕು ಎಂದು ಆಗ್ರಹಿಸಿದ, ಬೇಡಿಕೆ ಇಟ್ಟ ಬಗ್ಗೆ ಹೆಚ್ಚು ಸುದ್ದಿಯಾಗಿಲ್ಲ. 

ಈಗ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಸ್ವತಂತ್ರವಾಗಿ ಸರಕಾರ ರಚಿಸುತ್ತಿಲ್ಲ. ಆದರೆ ಅದು ಸರಕಾರ ರಚಿಸುತ್ತಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ತನಗೆ ಮನಪೂರ್ವಕ ಬೆಂಬಲ ನೀಡಿದ ಮುಸ್ಲಿಂ ಸಮುದಾಯಕ್ಕೆ ಯಾವ ರೀತಿ ನ್ಯಾಯ ಒದಗಿಸಬಹುದು ಎಂದು ಕಾಂಗ್ರೆಸ್ ಹೈಕಮಾಂಡ್ ಪ್ರಾಮಾಣಿಕತೆಯಿಂದ ಚಿಂತಿಸಲು ಮತ್ತು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಇದು ಸಕಾಲ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸು ಮಾಡಿದ ಮೇಲೂ ಆ ಸಮುದಾಯದ ನಿರೀಕ್ಷಿತ ಮತಗಳು ಬಂದಿಲ್ಲ. ಇನ್ನು ಒಕ್ಕಲಿಗರು ಒಗ್ಗಟ್ಟಾಗಿ ಜೆಡಿಎಸ್ ಮತ್ತು ಅದು ದುರ್ಬಲವಾಗಿರುವ ಕಡೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂಬುದು ಸ್ಪಷ್ಟ. ಅದಕ್ಕಿಂತಲೂ ಮುಖ್ಯವಾದದ್ದು, ನಂಬಿಕೊಂಡ 'ಹಿಂದ' ಮತಗಳು ಕೈಯಿಂದ ಜಾರಿದ್ದು. ಸಿದ್ದು ಸರಕಾರ ಹಿಂದುಳಿದವರು ಮತ್ತು ದಲಿತರ ಬಗ್ಗೆ ಅದೆಷ್ಟೇ ಒಳ್ಳೆಯ ಕೆಲಸ ಮಾಡಿದ್ದರೂ, ಅವರ ಸರ್ಕಾರಕ್ಕೆ ಇದು ಅಹಿಂದ ಸರಕಾರ ಎಂದೇ ಹಣೆಪಟ್ಟಿ ಬಂದಿದ್ದರೂ ಚುನಾವಣೆಯಲ್ಲಿ ಈ ಎರಡೂ ವರ್ಗಗಳಿಂದ ಸಿದ್ದರಾಮಯ್ಯನವರಿಗೆ ಬರಬೇಕಾದಷ್ಟು ಮತಗಳು ಬಂದಿಲ್ಲ ಎಂಬುದು ಫಲಿತಾಂಶವೇ ಸಾರಿ ಸಾರಿ ಹೇಳುತ್ತಿದೆ. ಆದರೆ ರಾಜ್ಯದ ಮುಸ್ಲಿಮರು ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಕೈ ಹಿಡಿದಿದ್ದಾರೆ. ಸುಮಾರು 80% ಕ್ಕೂ ಹೆಚ್ಚು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ ಎಂಬುದು ಫಲಿತಾಂಶದ ವಿಶ್ಲೇಷಣೆಯಿಂದ ಖಚಿತವಾಗಿದೆ. ಅಂದರೆ ಕಾಂಗ್ರೆಸ್ 78 ಸ್ಥಾನಗಳನ್ನು ಪಡೆಯುವಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಸತ್ಯವನ್ನು ಕಾಂಗ್ರೆಸ್ ವರಿಷ್ಠರು ಮರೆಯಬಾರದು. ತಮಗೆ ಬೆಂಬಲ ನೀಡಿದ ಸಮುದಾಯಕ್ಕೆ ತಾವು ನ್ಯಾಯಯುತವಾಗಿ ಸಲ್ಲಬೇಕಾದ್ದನ್ನು ಹೇಗೆ ಕೊಡಬೇಕು ಎಂದು ಆ ಪಕ್ಷ ಕಪಟತನವಿಲ್ಲದೆ ಯೋಚಿಸಬೇಕಾಗಿದೆ. 

ಕಾಂಗ್ರೆಸ್ ನಲ್ಲೀಗ ಏಳು ಮುಸ್ಲಿಂ ಶಾಸಕರಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಿಂದ ಯಾವುದೇ ಮುಸ್ಲಿಂ ಶಾಸಕರು ಈ ಬಾರಿ ಆಯ್ಕೆಯಾಗಿಲ್ಲ. ಇನ್ನು ಮುಸ್ಲಿಮರು ಬೇರೆ ಯಾವುದೇ ಪಕ್ಷದಿಂದ ಅಥವಾ ಪಕ್ಷೇತರರಾಗಿಯೂ ಈ ಬಾರಿ ಗೆದ್ದಿಲ್ಲ. ಹಾಗಾಗಿ ಇದು ಕೂಡ ಸಮುದಾಯದ ಚಿಂತಾಜನಕ ಪರಿಸ್ಥಿತಿ. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಡಿಮೆ ಮುಸ್ಲಿಂ ಶಾಸಕರು ಈ ಬಾರಿ ಆಯ್ಕೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಕುಂಟು ನೆಪ ಹೇಳಿ ಮುಸ್ಲಿಮರಿಗೆ ವಂಚಿಸಬಾರದು. 

ತನಗೆ ಸಿಗುವ 20 - 22 ಸಚಿವ ಸ್ಥಾನಗಳಲ್ಲಿ ಕನಿಷ್ಠ 3 ಸ್ಥಾನಗಳನ್ನು ಮುಸ್ಲಿಮರಿಗೆ ಕೊಡಬೇಕು. ಮತ್ತು ಆ ಮೂವರಿಗೆ ಕಂದಾಯ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಇತ್ಯಾದಿ ಟಾಪ್ 10 ಖಾತೆಗಳಲ್ಲಿ ಮೂರನ್ನು ಕೊಡಬೇಕು. ಕಾಂಗ್ರೆಸ್ ನಿಂದ ಆಯ್ಕೆಯಾದವರಲ್ಲಿ ಯಾವುದೇ ಖಾತೆ ನಿರ್ವಹಿಸಬಲ್ಲ ಅನುಭವಿಗಳು, ಚಾಣಾಕ್ಷರು ಇದ್ದಾರೆ. ಅನುಭವ, ಈ ಹಿಂದಿನ ಸಾಧನೆ, ಈ ಚುನಾವಣೆಯಲ್ಲಿ ಗಳಿಸಿದ ಮತ, ಪ್ರಾದೇಶಿಕ ಪ್ರಾತಿನಿಧ್ಯ, ಪಕ್ಷಕ್ಕೆ ಸಲ್ಲಿಸಿದ ಸೇವೆ, ಜನರ ನಡುವೆ ಇರುವ ಅಭಿಪ್ರಾಯ - ಇವೆಲ್ಲವುಗಳನ್ನು ಪರಿಗಣಿಸಿ ಈ ಏಳರಲ್ಲಿ ಯಾರಿಗೆ ಬೇಕಾದರೂ ಕೊಡಲಿ, ಆದರೆ ಕನಿಷ್ಠ ಮೂವರನ್ನು ಕ್ಯಾಬಿನೆಟ್ ಮಂತ್ರಿ ಮಾಡಲಿ. ಇನ್ನು ಕ್ರೈಸ್ತರಿಗೆ, ಜೈನರಿಗೆ ಇತ್ಯಾದಿ ಅಲ್ಪಸಂಖ್ಯಾತರಿಗೂ ಪ್ರಾತಿನಿಧ್ಯ ನೀಡಲಿ. ಸಾಮಾಜಿಕ ನ್ಯಾಯ ಬರೀ ಮಾತಾಗದೇ ಅನುಷ್ಠಾನಕ್ಕೆ ಬರಲಿ. 
ಹೀಗೆ ಮಾಡದೆ ಕುಂಟು ನೆಪ ಹೇಳಿ ಮುಸ್ಲಿಮರಿಗೆ ಮೋಸ ಮಾಡಿದರೆ ಮುಂದೆ ಪಕ್ಷ ಇದಕ್ಕೆ ಬೆಲೆ ತೆರಬೇಕಾಗುತ್ತದೆ. ಇನ್ನು ಮುಸ್ಲಿಮರಿಗೆ ಸಚಿವ ಸ್ಥಾನ ನೀಡಿದರೆ ಹಿಂದೂ ಮತಗಳು ದೂರವಾಗುತ್ತವೆ ಎಂದು ಹೆದರಿಸುವ ಕೆಲವು ಕಾಂಗ್ರೆಸ್ ಮುಖಂಡರು ಕಳೆದ ಚುನಾವಣೆಯಲ್ಲಿ ಎಷ್ಟು ಹಿಂದೂ ಮನೆಗಳಿಗೆ ತಲುಪಿದ್ದಾರೆ ? ಸಿದ್ದು ಸರಕಾರದ ಯೋಜನೆಗಳ ಬಗ್ಗೆ ಎಷ್ಟು ಹಿಂದೂಗಳಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ ? ಎಷ್ಟು ಹಿಂದೂಗಳಿಗೆ ಪಕ್ಷ ಮಾಡಿರುವ ಸಾಧನೆಗಳನ್ನು ಮನವರಿಕೆ ಮಾಡಿ ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿವರಿಸಬೇಕಾಗಿದೆ. ಮಂತ್ರಕ್ಕೆ ಮಾವಿನ ಹಣ್ಣು ಉದುರುವುದಿಲ್ಲ ಎಂದ ಹಾಗೆ ವೇದಿಕೆಯಲ್ಲಿ ಭಾಷಣ ಬಿಗಿದರೆ ಎಲ್ಲರೂ ಮತ ಹಾಕುವುದಿಲ್ಲ, ಅದಕ್ಕಾಗಿ ಶ್ರಮಪಡಬೇಕು ಎಂಬುದನ್ನು ಕೆಲವು ಕಾಂಗ್ರೆಸ್ ಮುಖಂಡರು ಮರೆತಿದ್ದಾರೆ. ಅಂತಹವರು ಈಗ ಮುಸ್ಲಿಮರಿಗೆ ಹೆಚ್ಚು ಸ್ಥಾನ ಕೊಡುವುದು ಬೇಡ ಎಂಬ ರಾಗ ಪ್ರಾರಂಭಿಸಿದ್ದಾರೆ. 

ಹೆಚ್ಚು ಸ್ಥಾನ ಯಾವ ಸಮುದಾಯಕ್ಕೂ ನೀಡಬಾರದು. ಆದರೆ ನ್ಯಾಯಯುತವಾಗಿ ಸಿಗಬೇಕಾದ ಸ್ಥಾನಗಳನ್ನು ನೀಡಲೇಬೇಕು. ಆಗಲೇ ನ್ಯಾಯಪಾಲನೆ ಆಗುತ್ತದೆ. ಇದನ್ನು ಮರೆತರೆ ಮುಂದೆ ಮುಸ್ಲಿಮರು ಕಾಂಗ್ರೆಸನ್ನು ಮರೆಯಬೇಕಾಗುತ್ತದೆ.

Writer - ಅಬ್ದುಲ್ ಖಾದರ್, ಪುತ್ತೂರು

contributor

Editor - ಅಬ್ದುಲ್ ಖಾದರ್, ಪುತ್ತೂರು

contributor

Similar News