ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನಾಳೆ ಮತದಾನ: ಬಿಗಿ ಪೊಲೀಸ್ ಬಂದೂಬಸ್ತ್

Update: 2018-05-27 11:43 GMT

ಬೆಂಗಳೂರು, ಮೇ 27: ಗುರುತಿನ ಚೀಟಿ ಪತ್ತೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ನಾಳೆ(ಮೇ 28) ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ನಡೆಯಲಿದ್ದು, ಮುಕ್ತ-ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ.

ರವಿವಾರ ಮಧ್ಯಾಹ್ನದಿಂದಲೇ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ (ಇವಿಎಂ), ವಿವಿ ಪ್ಯಾಟ್‌ಗಳು ಸೇರಿದಂತೆ ಚುನಾವಣಾ ಪರಿಕರಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದು, ಬೆಳಗ್ಗೆಯಿಂದಲೇ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

2.46 ಲಕ್ಷಕ್ಕೂ ಅಧಿಕ ಪುರುಷರು, 2.25 ಲಕ್ಷಕ್ಕೂ ಅಧಿಕ ಮಹಿಳೆಯರು ಸೇರಿದಂತೆ ಒಟ್ಟು 4.71 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿ ಒಟ್ಟು 14ಮಂದಿ ಅಭ್ಯರ್ಥಿಗಳಿದ್ದು, ಮತದಾರರು ಘಟಾನುಘಟಿ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ.

ಕ್ಷೇತ್ರದಲ್ಲಿ 4-ಕ್ಲಿಷ್ಟಕರ, 47-ಅತಿಸೂಕ್ಷ್ಮ, 186-ಸೂಕ್ಷ್ಮ ಹಾಗೂ 184-ಸಾಮಾನ್ಯ ಸೇರಿದಂತೆ ಒಟ್ಟು 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಚುನಾವಣಾ ಕಾರ್ಯಕ್ಕೆ 2524 ಮಂದಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, ಮತಗಟ್ಟೆ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪೊಲೀಸ್ ಬಂದೂಬಸ್ತ್: ಚುನಾವಣಾ ಭದ್ರತೆಗೆ 10 ಸಿಪಿಎಂಎಫ್, 15 ಕೆಎಸ್ಸಾರ್ಪಿ ತುಕಡಿಗಳು, ಇಬ್ಬರು ಡಿಸಿಪಿ, ಐವರು ಎಸಿಪಿ, 16ಮಂದಿ ಇನ್ಸ್‌ಪೆಕ್ಟರ್ ಸೇರಿದಂತೆ ಉತ್ತರ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಗುರುತಿನ ಚೀಟಿ ವಾಪಸ್: ಮನೆಯೊಂದರಲ್ಲಿ ಪತ್ತೆಯಾಗಿದ್ದ 9 ಸಾವಿರಕ್ಕೂ ಹೆಚ್ಚು ಗುರುತಿನ ಚೀಟಿಗಳನ್ನು ಈಗಾಗಲೇ ಮತದಾರರಿಗೆ ಹಿಂದಿರುಗಿಸಿದ್ದು, ಮತದಾರರು ಯಾವುದೇ ಆತಂಕ-ಒತ್ತಡಗಳಿಲ್ಲದೆ ನಿರ್ಭಯವಾಗಿ ತಮ್ಮ ಹಕ್ಕನ್ನು ಚಲಾಯಿಸಬಹುದು ಎಂದು ಆಯೋಗ ಅಭಯ ನೀಡಿದೆ.

ಕ್ಷೇತ್ರದಲ್ಲಿಂದು ರಜೆ: ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಈ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲ ಸರಕಾರಿ ಕಚೇರಿ, ಶಾಲಾ-ಕಾಲೇಜು, ಖಾಸಗಿ ಕಂಪೆನಿಗಳು, ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದ್ದು, ಮತದಾರರಿಗೆ ವೇತನ ಸಹಿತ ರಜೆ ನೀಡಬೇಕೆಂದು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರಕ್ಕೆ ಒಂದು ರೀತಿ ಅಗ್ನಿ ಪರೀಕ್ಷೆ ಎಂದೇ ವಿಶ್ಲೇಷಿಸಲಾಗುತ್ತಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯತ್ತ ಎಲ್ಲ ದೃಷ್ಟಿ ನೆಟ್ಟಿದ್ದು, ಮೇ 31ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ ಫಲಿತಾಶ ಹೊರಬೀಳುವ ಸಾಧ್ಯತೆಗಳಿವೆ.

ಅಭ್ಯರ್ಥಿಗಳಿಗೆ ಬಂಧನ ಭೀತಿ
‘ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಬಂಧನ ಭೀತಿ ಎದುರಾಗಿದ್ದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ತುಳುಸಿ ಮುನಿರಾಜು ಅವರಿಗೂ ಬಂಧನ ಭೀತಿ ಆವರಿಸಿದೆ. 2014ರ ಪ್ರಕರಣ ಸಂಬಂಧ ಮುನಿರಾಜು ವಿರುದ್ಧ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News