ತೂತುಕುಡಿ ಗೋಲಿಬಾರ್ ಪ್ರಕರಣ: ಸಿಬಿಐ ತನಿಖೆಗೆ ಆಗ್ರಹಿಸಿ ಬೆಂಗಳೂರು ತಮಿಳರ ಸಂಘ ಧರಣಿ

Update: 2018-05-27 11:46 GMT

ಬೆಂಗಳೂರು, ಮೇ 27: ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಸ್ಟರ್ಲೈಟ್ ಕಾರ್ಖಾನೆಯನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಿದ ರೈತರ ಮೇಲೆ ಪೊಲೀಸರ ಕಾನೂನನ್ನು ಉಲ್ಲಂಘಿಸಿ ಗೋಲಿಬಾರ್‌ನಲ್ಲಿ ನಡೆಸಿದ್ದು, 16 ಮಂದಿ ಹತ್ಯೆ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರು ತಮಿಳು ಸಂಘ ನಗರದ ಪುರಭವನದ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿತು.

ರವಿವಾರ ಬೆಂಗಳೂರು ತಮಿಳರ ಸಂಘ, ಕರ್ನಾಟಕ ತಮಿಳ ಮಕ್ಕಳ ಒಕ್ಕೂಟ, ಆದರ್ಶ ಆಟೋ ಯೂನಿಯನ್ ಸಂಘದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ, ನಮ್ಮ ನೆಲದ ಉಳಿವಿಗಾಗಿ ಹೋರಾಟ ಮಾಡಿದ ನಮ್ಮ ರೈತರನ್ನು ಗೋಲಿಬಾರ್ ನಡೆಸಿ ಕೊಲೆ ಮಾಡಲಾಗಿದೆ. ಈ ಹತ್ಯಾಕಾಂಡದಲ್ಲಿ ತಮಿಳುನಾಡು ಸರಕಾರ, ಕೇಂದ್ರ ಸರಕಾರ, ಸ್ಪರ್ಲೈಟ್ ಕಂಪೆನಿ ಹಾಗೂ ಪೊಲೀಸರು ನೇರ ಭಾಗಿದಾರರಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಒತ್ತಾಯಿಸುವುದು ಸೂಕ್ತವೆಂದು ಒತ್ತಾಯಿಸಿದರು.

ಬೆಂಗಳೂರು ತಮಿಳು ಸಂಘದ ಅಧ್ಯಕ್ಷ ದಾಮೋದರನ್ ಮಾತನಾಡಿ, ಸ್ಟರ್ಲೈಟ್ ಕಂಪೆನಿ ಪ್ರಾರಂಭವಾದಾಗಿನಿಂದಲೂ ಅಲ್ಲಿಂದ ವಿಷಗಾಳಿ ಹೊರಬರುತ್ತಿದ್ದು, ತೂತ್ತುಕುಡಿ ಸುತ್ತಮುತ್ತಲಿನ ಪ್ರದೇಶದ ವಾತಾವರಣವು ವಿಷಮಯವಾಗಿದೆ. ಹಾಗೂ ಕಳೆದ 10-15ವರ್ಷಗಳಿಂದ ನೂರಾರು ಮಂದಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಹಲವು ಮಾರಕ ರೋಗಗಳಿಂದ ನರಳುತ್ತಿದ್ದಾರೆ ಎಂದು ಕಾರ್ಖಾನೆಯಿಂದ ಆಗುತ್ತಿರುವ ದುಷ್ಪರಿಣಾಮವನ್ನು ಬಿಚ್ಚಿಟ್ಟರು.

ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಬೀರುವ ಸ್ಟರ್ಲೈಟ್ ಕಾರ್ಖಾನೆಯನ್ನು ಬಂದ್ ಮಾಡುವ ಮೂಲಕ ತೂತ್ತುಕುಡಿ ಪ್ರದೇಶದ ಜನತೆಗೆ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿಯೆಂದು ರಾಜ್ಯಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜನತೆಯ ವಿರೋಧದ ನಡುವೆಯು ಸ್ಟರ್ಲೈಟ್ ಕಂಪೆನಿಗೆ ಪುನಃ 500ಕ್ಕೂ ಎಕರೆ ಭೂಮಿಯನ್ನು ಕೊಡಲು ತಮಿಳುನಾಡು ಸರಕಾರ ನಿರ್ಧರಿಸಿದೆ. ಇದರಿಂದ ಸಹಜವಾಗಿ ಆಕ್ರೋಶಗೊಂಡ ತೂತ್ತುಕುಡಿ ಪ್ರದೇಶದ ಜನತೆ ಶಾಂತಿಯುತ ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಸರಕಾರ ಹಾಗೂ ಪೊಲೀಸ್ ಇಲಾಖೆ ಗೋಲಿಬಾರ್ ನಲ್ಲಿ ರೈತರನ್ನು ಕೊಲ್ಲುವ ಮೂಲಕ ಹೋರಾಟವನ್ನು ಮಣಿಸಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದರು.

ರೈತರ ಸಾವಿಗೆ ಹೊಣೆಹೊರಲಿ: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಪ್ರತಿಯೊಬ್ಬರ ಹಕ್ಕು. ಹೋರಾಟಕ್ಕೆ ಅಡ್ಡಿ ಪಡಿಸುವುದಕ್ಕೆ ಯಾರಿಗೂ ಅವಕಾಶವಿಲ್ಲ. ಆದರೂ ತಮಿಳುನಾಡು ಸರಕಾರ ಹಾಗೂ ಪೊಲೀಸ್ ಇಲಾಖೆ ಕಾನೂನು ಚೌಕಟ್ಟನ್ನು ಮೀರಿ ರೈತರ ಮೇಲೆ ಗುಂಡು ಹಾರಿಸಿದೆ. ಇದಕ್ಕೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ನೇರ ಹೊಣೆಹೊರಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಗೃಹ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ತಮಿಳ ಮಕ್ಕಳ ಒಕ್ಕೂಟದ ರಾಜನ್, ಕನ್ನಡ ತಮಿಳು ಸೌಹಾರ್ಧ ಸಮಾಜ ಸೇವಾ ಟ್ರಸ್ಟ್‌ನ ರಾಮಚಂದ್ರನ್, ಆದರ್ಶ ಆಟೋ ಅಸೋಸಿಯೇಷನ್‌ನ ಸದಸ್ಯ ಸಂಪತ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿ ಭಟನೆಯಲ್ಲಿ ಭಾಗವಹಿಸಿದ್ದರು.

ಹಕ್ಕೋತ್ತಾಯಗಳು: ಕೂಡಲೇ ಸ್ಟರ್ಲೈಟ್ ಕಾರ್ಖಾನೆಯನ್ನು ಬಂದ್ ಮಾಡಬೇಕು. ಸ್ಟರ್ಲೈಟ್ ಕಾರ್ಖಾನೆ ಮಾಲಿಕರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು. ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ವೃತ್ತಿಯಿಂದ ವಜಾಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು. ಗೋಲಿಬಾರ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News