ದೇಶದ ಇತಿಹಾಸದಿಂದ ನೆಹರೂ ಹೆಸರು ಅಳಿಸಿ ಹಾಕುವ ಹುನ್ನಾರ: ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್

Update: 2018-05-27 13:05 GMT

ಬೆಂಗಳೂರು, ಮೇ 26: ದೇಶದ ಇತಿಹಾಸದಿಂದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಹೆಸರನ್ನು ಅಳಿಸಿ ಹಾಕುವ ಹುನ್ನಾರ ನಡೆಯುತ್ತಿದ್ದು, ಪ್ರಧಾನಿ ಮೋದಿ, ನೆಹರೂ ವಿರುದ್ಧ ಇಲ್ಲ-ಸಲ್ಲದ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಆರೋಪಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪಂಡಿತ್ ಜವಾಹರಲಾಲ್ ನೆಹರು ಪುಣ್ಯತಿಥಿ ಹಿನ್ನೆಲೆಯಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲೇ ನೆಹರೂ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿಲ್ಲ. ಆದರೆ, ಪ್ರಧಾನಿ ಮೋದಿ ಅವಕಾಶ ಸಿಕ್ಕಾಗ ಅವರ ಮೇಲೆ ಕೋಪದಿಂದ ಮಾತನಾಡುತ್ತಿದ್ದಾರೆ ಎಂದರು.

2014ರ ಬಿಜೆಪಿಯ ಪ್ರಣಾಳಿಕೆಯ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರು ಮತ್ತು ಅಂಬೇಡ್ಕರ್ ಹೆಸರು ಸೇರಿಸಿರಲಿಲ್ಲ. ಅಂಬೇಡ್ಕರ್ ಹಿಂದುತ್ವದ ಪರಿಕಲ್ಪನೆ ಒಪ್ಪದೆ ಇದ್ದುದರಿಂದ ಬಿಜೆಪಿಯವರು ಟೀಕಿಸಿದ್ದು, ಚುನಾವಣೆಯಲ್ಲಿ ದಲಿತರ ಮತ ಪಡೆಯಲು ಅಂಬೇಡ್ಕರ್ ಜಪ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ನೆಹರು, ಅಂಬೇಡ್ಕರ್ ಅವರು ಸಂವಿಧಾನವನ್ನು ಬ್ರಿಟನ್‌ನಿಂದ ನೇರವಾಗಿ ತಂದು ರೂಪಿಸಲಿಲ್ಲ. ಪ್ರತಿ ಅಂಶವನ್ನು ಅಧ್ಯಯನ ಮಾಡಿ ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಸೇರಿಸಿದ್ದರು ಎಂಬುದನ್ನು ಪ್ರಧಾನಿ ಮೋದಿ, ಅನಂತಕುಮಾರ್ ಹೆಗಡೆ, ಮುರುಳಿಮನೋಹರ್ ಜೋಶಿ ಅರಿತುಕೊಳ್ಳಬೇಕು ಎಂದು ವಾಗ್ಧಾಳಿ ನಡೆಸಿದರು.

ಹಿರಿಯ ಮುಖಂಡ ಎಂ.ವಿ.ರಾಜಶೇಖರ್ ಮಾತನಾಡಿ, ವಿಜ್ಞಾನ, ಕೈಗಾರಿಕೆ, ಕೃಷಿ ಮತ್ತು ತಂತ್ರಜ್ಞಾನದ ಮೇಲೆ ನೆಹರು ಹಾಕಿದ್ದ ಬುನಾದಿ ಮೇಲೆ ಭಾರತ ಸುಭದ್ರವಾಗಿ ನಿಂತು ಕೊಂಡಿದೆ ಎಂಬುದನ್ನು ಬಿಜೆಪಿ ತಿಳಿಕೊಳ್ಳಬೇಕು. ದೇಶದ ಅಭಿವೃದ್ಧಿ ಬಗ್ಗೆ ನೆಹರು ಸಾಕಷ್ಟು ಮುಂದಾಲೋಚನೆ ಹೊಂದಿದ್ದರು ಎಂದು ತಿಳಿಸಿದರು.

ಪ್ರೊ.ಕೆ.ಇ.ರಾಧಾಕಷ್ಣ ಮಾತನಾಡಿ, ನೆಹರು ಸಂಸತ್‌ನಲ್ಲಿ ವಿಪಕ್ಷಗಳು ಟೀಕೆಸಿದರೆ ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದರು. ಲೋಹಿಯಾ ನೆಹರು ವಿರುದ್ಧ ಸೋತಾಗ ‘ಲೋಹಿಯಾ ಇಲ್ಲದ ಸಂಸತ್ತು ಅಪೂರ್ಣ’ ಎಂದಿದ್ದು, ಮರು ಚುನಾವಣೆಯಲ್ಲಿ ಗೆದ್ದ ಬಂದಾಗ ಪ್ರಶಂಸಿಸಿ ‘ಈಗ ಸಂಸತ್ತು ಪರಿಪೂರ್ಣವಾಯಿತು’ ಎಂದು ವಿಪಕ್ಷದವರವನ್ನು ಗೌರವಿಸುತ್ತಿದ್ದರು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇದನ್ನು ಕಲಿಯಬೇಕೆಂದರು. ಹಿರಿಯ ಮುಖಂಡರಾದ ಎಂ.ಆರ್.ವೆಂಕಟೇಶ್, ಜಿ.ಕೃಷ್ಣಪ್ಪ, ಮಾರುತಿ ಹಾಜರಿದ್ದರು.

‘ದೇಶದ ಸಂವಿಧಾನ ಬದಲಾಯಿಸುವುದಿಲ್ಲ ಎಂದು ಪ್ರಧಾನಿ ಮೋದಿ ಬಹಿರಂಗವಾಗಿ ಹೇಳಿಕೆ ನೀಡಲಿ’
-ಪ್ರೊ.ಬಿ.ಕೆ.ಚಂದ್ರಶೇಖರ್ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News