ಕವಿತೆಗಳಲ್ಲಿ ಕನ್ನಡತನ ಅಡಗಿರಲಿ: ಕವಿ ಡಾ.ವೆಂಕಟೇಶಮೂರ್ತಿ
ಬೆಂಗಳೂರು, ಮೇ 27: ಕವಿಗಳು ಯಾವ ಭಾಷೆಯಲ್ಲಾದರೂ ಕವಿತೆ ರಚಿಸಿದರೂ, ಅದರಲ್ಲಿ ಕನ್ನಡತನ ಅಡಗಿರಲಿ ಎಂದು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಸಲಹೆ ಮಾಡಿದ್ದಾರೆ.
ರವಿವಾರ ಮಲ್ಲೇಶ್ವರಂನಲ್ಲಿರುವ ಎಂಇಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿ ಶ್ರೀವಿದ್ಯಾ ಪ್ರಸಾದ್ ರಚಿಸಿರುವ ‘ವಾಯೇಜ್ ತ್ರೂ ವರ್ಸಸ್’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕವಿತೆ ರಚನೆ ಮಾಡುವವರು ಯಾವ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಲಿ. ಆದರೆ, ಕನ್ನಡ ನಾಡಿನಲ್ಲಿ ಹುಟ್ಟಿರುವುದರಿಂದ ಅದರಲ್ಲಿ ಕನ್ನಡ ಮಣ್ಣಿನ ಸಂಸ್ಕೃತಿ ಅಡಗಿರಲಿ ಎಂದು ಹೇಳಿದರು.
ಆಧುನಿಕ ಶಿಕ್ಷಣ ಪದ್ಧತಿ ಮಕ್ಕಳ ನಾಲಿಗೆಯಿಂದ ಮಾತೃಭಾಷೆಯನ್ನು ಕಿತ್ತು ಹಾಕಿ ಇಂಗ್ಲಿಷನ್ನು ನಾಟಿ ಮಾಡಲಾಗುತ್ತಿದೆ. ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ ಎಂದ ಅವರು, ಕವಿಗಳಿಗೆ ಭಾಷೆಯ ಅಂಗಿಲ್ಲ ಎಂಬುದನ್ನು ಅರ್ಧದಷ್ಟು ಮಾತ್ರ ಒಪ್ಪುತ್ತೇನೆ. ಇಂಗ್ಲಿಷ್‌ನಲ್ಲಿ ಕವಿತೆ ಬರೆದರೆ ಅದು ಕನ್ನಡದ್ದಾಗಿರಬೇಕು ಹಾಗೂ ಬೇರೆ ಭಾಷೆಯಲ್ಲಿ ಬರೆದ ಕವನ ಕನ್ನಡಿಗರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು ಎಂದು ತಿಳಿಸಿದರು.
ನನಗೆ ನನ್ನ ಕವಿತೆಗಳ ಬಗ್ಗೆ ಮಾತನಾಡಲು ನಾಚಿಕೆ ಹಾಗೂ ಸಂಕೋಚವಾಗುತ್ತದೆ ಎಂದ ವೆಂಕಟೇಶಮೂರ್ತಿ, ಕವಿ ಎಂದು ನಾವು ಕೇಳುವ ಧ್ವನಿಯನ್ನು ಪಿಸುಧ್ವನಿಯಲ್ಲಿ ಮತ್ತೆ ಧ್ವನಿಸುವವರು ಹಾಗೂ ಶಬ್ಧ ತುಂಬಿಕೊಂಡಿರುವ ಸ್ಥಳದಲ್ಲಿ ಹೂ ಅರಳುವುದನ್ನು ಕೇಳಿಸಿಕೊಳ್ಳುವವರು ನಿಜವಾದ ಕವಿಗಳು ಎಂದು ಹೇಳಬಹುದಾಗಿದೆ. ವರಕವಿ ಬೇಂದ್ರೆ ತಮ್ಮ ಕವನಗಳ ಮೂಲಕ ಅದನ್ನು ಸಾಬೀತು ಮಾಡಿದ್ದಾರೆಂದು ನೆನೆಪಿಸಿಕೊಂಡರು.
ಇಂದಿನ ಮಕ್ಕಳು ಸಿನಿಮಾ, ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, ಶ್ರೀವಿದ್ಯಾ ಎಲ್ಲದಕ್ಕಿಂತ ಭಿನ್ನವಾಗಿ ಪುಸ್ತಕಗಳ ಹುಚ್ಚು ಹತ್ತಿಸಿಕೊಂಡಿದ್ದಾಳೆ ಎಂದು ಶ್ಲಾಘಿಸಿದ ಅವರು, ಏಕಾಂತವನ್ನು ಎದುರಿಸುವವರು ಕವಿಗಳಾಗುತ್ತಾರೆ. ಕವಿತೆ ಧ್ಯಾನದ ಫಲ, ಧ್ಯಾನವಿಲ್ಲದ ಕವಿತೆಯಲ್ಲಿ ಸತ್ವವಿರುವುದಿಲ್ಲ. ಬೇಂದ್ರೆ, ಕುವೆಂಪು, ಅಡಿಗ, ನರಸಿಂಹಸ್ವಾಮಿ ಸೇರಿದಂತೆ ಅನೇಕರು ಆಧುನಿಕ ಋಷಿಗಳಾಗಿದ್ದಾರೆ ಎಂದು ನುಡಿದರು.
ಮೌನ ವಿಕಾಸವಾದಾಗ ಮಾತಾಗುತ್ತದೆ ಎಂಬ ಮಾತಿದೆ. ಆದರೆ, ಇಂದಿನ ದಿನಗಳಲ್ಲಿ ಮೌನವನ್ನು ಕೊಲೆ ಮಾಡಲಾಗುತ್ತಿದೆ. ರಾಜಕಾರಣಗಳು ಭಾಷೆಯನ್ನು ಕೊಲೆ ಮಾಡುತ್ತಿದ್ದಾರೆ. ಅದನ್ನು ಯಾವ ರೀತಿ ನಾವು ಬಳಸಬೇಕು ಎಂದು ಸಾಹಿತಿಗಳು ಪ್ರಶ್ನಿಸಿಕೊಳ್ಳಬೇಕು ಹಾಗೂ ಅದರ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಅವರು ಹೇಳಿದರು.
ಕವಿಯತ್ರಿ ಡಾ.ವಿಜಯಾ ಸುಬ್ಬರಾಜ್ ಮಾತನಾಡಿ, ಶ್ರೀವಿದ್ಯಾ ಸಣ್ಣ ವಯಸ್ಸಿನಲ್ಲಿಯೇ ಸಾಹಿತ್ಯದ ಕಡೆ ಆಕರ್ಷಿತವಾಗಿರುವುದು ಆಶ್ಚರ್ಯ ಹಾಗೂ ಅದ್ಭುತವಾಗಿದೆ. ಇಂದಿನ ಸಂದರ್ಭದಲ್ಲಿ ಕವಿತೆ ಬರೆಯುವವರಿಗೆ ಅನೇಕ ಮಾಡೆಲ್‌ಗಳು ಎದುರಿಗಿವೆ. ಆದರೆ, ನಮ್ಮ ಕಾಲಘಟ್ಟದಲ್ಲಿ ಯಾವುದೇ ಮಾಡೆಲ್‌ಗಳಿರಲಿಲ್ಲ. ಆದರೂ, ಅರ್ಥಪೂರ್ಣವಾದ ಕವಿತೆಗಳನ್ನು ಬರೆಯುತ್ತಿದ್ದರು ಎಂದು ತಿಳಿಸಿದರು.
ಹಿಂದಿನ 60-70 ರ ದಶಕದ ಕವಿತೆಗಳನ್ನು ಇಂದಿನ ಕವಿತೆಗಳು ಹಿಂದೆ ಸರಿಸಿವೆ. ಈಗ ಎಲ್ಲವೂ ವೈಭವೀಕೃತವಾದ ಪದ್ಯಗಳೇ ಹೆಚ್ಚು ಪ್ರಚಲಿತ ಪಡೆದುಕೊಳ್ಳುತ್ತಿವೆ. ಪದ್ಯವನ್ನು ಕೇಳುವ ಜನರೇ ಬೇರೆ ಇದ್ದಾರೆ ಹಾಗೂ ಆಂತರಿಕವಾಗಿ ಅನುಭವಿಸುವವರೇ ಬೇರೆಯಿದ್ದಾರೆ ಎಂದು ವಿಜಯಾ ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ಪ್ರಾಧ್ಯಾಪಕಿ ರೇಖಾ ರೈ ಉಪಸ್ಥಿತರಿದ್ದರು.