×
Ad

ಜಾತಿ ವ್ಯವಸ್ಥೆಯಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ನಿವೃತ್ತ ರಾಜ್ಯಪಾಲ ಡಾ.ರಾಮಜೋಯಿಸ್

Update: 2018-05-27 17:51 IST

ಬೆಂಗಳೂರು, ಮೇ 27: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿ ವ್ಯವಸ್ಥೆ ಹೆಚ್ಚುತ್ತಿದ್ದು, ಇದರಿಂದ ಪ್ರಜಾಪ್ರಭುತಕ್ಕೆ ಧಕ್ಕೆ ಬರುತ್ತಿದೆ ಎಂದು ನಿವೃತ್ತ ರಾಜ್ಯಪಾಲ ಡಾ. ರಾಮೋಯಿಸ್ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ಸಭಾಂಗಣದಲ್ಲಿ ವಂಶಿ ಪಬ್ಲಿಕೇಷನ್ಸ್ ಆಯೋಜಿಸಿದ್ದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದರೆ ಈ ಜಾತಿ ರಾಜಕೀಯ ಎಂಬುದು ಎಗ್ಗಿಲ್ಲದೆ ಬೆಳೆಯುತ್ತದೆ. ಮಾತ್ರವಲ್ಲದೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಈ ವ್ಯವಸ್ಥೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಅದನ್ನು ಹೋಗಲಾಡಿಸಲು ರಕ್ಷಾಬಂಧನವನ್ನು ವಿಸ್ತರಿಸಬೇಕು ಎಂದು ತಿಳಿಸಿದರು.

ದೇಶದಲ್ಲಿ ರಕ್ಷಾಬಂಧನ ಎಂಬ ಸಂಸ್ಕೃತಿ ಹೆಚ್ಚಿದಂತೆ ಜಾತಿ ವ್ಯವಸ್ಥೆ ಎಂಬುದು ಕಡಿಮೆಯಾಗುತ್ತದೆ ಹಾಗೂ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಉತ್ತರ ಭಾರತದಲ್ಲಿ ಈ ರಕ್ಷಾಬಂಧನ ಸಂಸ್ಕೃತಿ ಹೆಚ್ಚಾಗಿದ್ದು, ಅದು ದೇಶದ ಎಲ್ಲ ಭಾಗದಲ್ಲೂ ಪಸರಿಸಬೇಕು. ಆಗ ಜಾತಿ ಎಂಬುದು ನಾಶವಾಗುತ್ತದೆ. ದೇಶದ ಸಂಸ್ಕೃತಿಯೂ ವಿಕಾಸಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

ದಿನದಿಂದ ದಿನಕ್ಕೆ ಜಾತಿ ಎಂಬ ವ್ಯವಸ್ಥೆ, ಈ ಜಾತಿಯ ಮನೋಭಾವ ಹೆಚ್ಚಿದಷ್ಟು ದೇಶದ ಸಂಸ್ಕೃತಿ ನಾಶವಾಗುತ್ತದೆ. ಹೀಗಾಗಿ, ಅದನ್ನು ನಿಯಂತ್ರಿಸಲು ದೇಶದಲ್ಲಿ ಬಸವಣ್ಣ ಅವರ ವಚನಗಳು ಮತ್ತು ರಕ್ಷಾ ಬಂಧನ ಎಂಬ ಸಂದೇಶವನ್ನು ಜಾರಿಗೆ ತರಬೇಕು ಹಾಗೂ ಎಲ್ಲೆಡೆ ಪಸರಿಸಬೇಕು. ಧರ್ಮವೇ ನಮ್ಮ ಧ್ಯೇಯ, ಸಂಸ್ಕೃತಿ ಆಗಿದ್ದು, ನಮ್ಮ ಸಂಸ್ಕೃತಿ ವಿದೇಶಕ್ಕೆ ಮಾದರಿಯಾಗಿದೆ. ಹೀಗಾಗಿ, ಅದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳುಳ್ಳ ಪೀಠವು ಗೋಹತ್ಯೆ ನಿಷೇಧಿಸುವಂತೆ ಆದೇಶಿಸಿದೆ. ಆ ಆದೇಶ ದೇಶದೆಲ್ಲೆಡೆ ಶೀಘ್ರದಲ್ಲಿ ಜಾರಿಗೆ ಬಂದರೆ ಒಳಿತು ಎಂದರು.

ಚಿಂತಕ ಎಸ್.ಎಸ್.ಮಂಜುನಾಥ್ ಮಾತನಾಡಿ, ಜ್ಯೋತಿಷ್ಯ ಆಧ್ಯಾತ್ಮದ ಕಡೆಗೆ ಕರೆದೊಯ್ಯುತ್ತದೆ. ಹೀಗಾಗಿ, ಅದು ಇಂದು ಎಲ್ಲರಿಗೂ ಅತ್ಯಗತ್ಯವಿದೆ ಎಂದ ಅವರು, ಧರ್ಮ ಪರಿಪಾಲನೆ ಸಹ ಅಷ್ಟೇ ಮುಖ್ಯ ಎಂದರು.

ಮಂಡಗದ್ದೆ ಪ್ರಕಾಶ್ ಬಾಬು ಅವರ ‘ಬಾಂಧವ್ಯ ಬೆಸೆಯುವ ಹಬ್ಬಗಳು ಮತ್ತು ಮಹಾಮಹಿಮರ ಜಯಂತಿಗಳು’ ಹಾಗೂ ‘ಜ್ಯೋತಿಷ್ಯ ಪ್ರಕಾಶ’ ಎಂಬ ಪುಸ್ತಕಗಳನ್ನು ಇದೇ ವೇಳೆ ಲೋಕಾರ್ಪಣೆಗೊಳಿಸಲಾಯಿತು. ರಾಮಕೃಷ್ಣ ಮಠದ ಸ್ವಾಮಿ ಮಂಗಲನಾಥಾನಂದ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಪತ್ರಕರ್ತ ಜಿ.ಅನಿಲ್‌ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News