ನಾಳೆ ಕರ್ನಾಟಕ ಬಂದ್‌ಗೆ ಬಿಜೆಪಿ ಕರೆ
ಬೆಂಗಳೂರು, ಮೇ 27: ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು 24 ಗಂಟೆ ಕಳೆದಿದ್ದರೂ ರೈತರ ಸಾಲಮನ್ನಾ ಮಾಡದೆ ವಚನ ಭಷ್ಟರಾಗಿದ್ದಾರೆಂದು ಆರೋಪಿಸಿ ಬಿಜೆಪಿ, ಬೆಂಗಳೂರು ಹೊರತುಪಡಿಸಿ ನಾಳೆ ರಾಜ್ಯಾದ್ಯಂತ ‘ಸ್ವಯಂಪ್ರೇರಿತ ಕರ್ನಾಟಕ ಬಂದ್ ಕರೆ’ ನೀಡಿದೆ.
ಆದರೆ, ಬಿಜೆಪಿ ಕರೆ ನೀಡಿರುವ ಈ ಬಂದ್‌ಗೆ ರೈತ, ಕನ್ನಡಪರ ಸಂಘಟನೆಗಳು ಬೆಂಬಲ ನೀಡಿಲ್ಲ. ಹೊಟೇಲ್ ಮಾಲಕರು, ವರ್ತಕರು, ಪೆಟ್ರೋಲ್ ಬಂಕ್ ಮಾಲಕರು, ಲಾರಿ-ಆಟೋರಿಕ್ಷಾ ಚಾಲಕರು ಸೇರಿದಂತೆ ಯಾರೊಬ್ಬರೂ ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ. ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್ ಸಂಚಾರ ಎಂದಿನಂತೆ ಇರಲಿದೆ. ಆಟೋರಿಕ್ಷಾ, ಟ್ಯಾಕ್ಸಿ ಸೇವೆಯೂ ಇರಲಿದೆ. ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಯಾವುದೇ ಬಂದ್‌ಗೆ ಅವಕಾಶವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಹೀಗಾಗಿ ನಾಳೆ(ಮೇ 28) ಬೆಂಗಳೂರು ಹೊರತುಪಡಿಸಿ ಬಿಜೆಪಿ ಕರೆ ನೀಡಿರುವ ಬಂದ್‌ಗೆ ಕರಾವಳಿ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಬೆಳಗಾವಿ ಸೇರಿದಂತೆ ಕೆಲ ಜಿಲ್ಲಾ ಕೇಂದ್ರಗಳ ಸಾಂಕೇತಿಕ ಪ್ರತಿಭಟನೆಗಷ್ಟೇ ಸೀಮಿತಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
‘ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರಿಗೆ ದ್ರೋಹ ಬಗೆದಿದ್ದಾರೆ. ಹೀಗಾಗಿ ರಾಜ್ಯದ ಜನತೆಯೆ ಸ್ವಯಂ ಪ್ರೇರಿತ ಬಂದ್ ಆಚರಿಸಬೇಕು. ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ನಂಬಿದ ಜನತೆ ಜೆಡಿಎಸ್‌ಗೆ ನಿರೀಕ್ಷೆಗೂ ಮೀರಿ ಹೆಚ್ಚು ಸ್ಥಾನಗಳನ್ನು ನೀಡಿದ್ದರು. ಜನತೆಯ ಆಶೀರ್ವಾದದಿಂದ ಸಿಎಂ ಸ್ಥಾನಕ್ಕೇರಿರುವ ಅವರು, ಈಗ ರೈತರ ಸಾಲಮನ್ನಾ ಮಾಡಲಾಗುವುದಿಲ್ಲವೆಂದು ಹೇಳುತ್ತಿರುವುದು ಸಲ್ಲ ಎಂದು ಬಿಜೆಪಿ ಮುಖಂಡ ರವಿಕುಮಾರ್ ಆಕ್ಷೇಪಿಸಿದ್ದಾರೆ.
‘ಮುಖ್ಯಮಂತ್ರಿ ಕುಮಾರಸ್ವಾಮಿಯವರ ರೈತ ವಿರೋಧಿ ನೀತಿ ವಿರೋಧಿಸಿ ಬಿಜೆಪಿ ಕರೆ ನೀಡಿರುವ ಬಂದ್‌ನಲ್ಲಿ ನಾನೂ ಸೇರಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ವೇಳೆ ಸರಕಾರ ಪೊಲೀಸರ ಮೂಲಕ ಲಾಠಿ ಪ್ರಹಾರ ಮಾಡಿಸಿದರೂ, ಜೈಲಿಗೆ ಹಾಕಿದರೂ ನಾವು ಹೆದರುವ ಪ್ರಶ್ನೆಯೇ ಇಲ್ಲ’
-ಬಿ.ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರದ ಶಾಸಕ
‘ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ರೈತ ಸಂಘ ಹಾಗೂ ಖಾಸಗಿ ವಾಹನಗಳ ಮಾಲಕರ ಸಂಘ ಬೆಂಬಲವಿಲ್ಲ. ಮುಖ್ಯಮಂತ್ರಿಯೊಂದಿಗೆ ಯಾವುದೇ ಚರ್ಚೆ ಮಾಡದೆ ಏಕಾಏಕಿ ಬಂದ್ ಕರೆ ಸರಿಯಲ್ಲ ಎಂದು ಮುಖಂಡರು ಆಕ್ಷೇಪಿಸಿದ್ದಾರೆ’
-ಶಾಲಾ ಕಾಲೇಜುಗಳಿಗೆ ರಜೆ ಇಲ್ಲ
-ಚಿತ್ರಮಂದಿಗಳು, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
-ಕೆಎಸ್ಸಾರ್ಟಿಸಿ ಸೇರಿದಂತೆ ಸರಕಾರಿ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೆ ವ್ಯತ್ಯಯವಿಲ್ಲ.