ಇವಿಎಂ ವಿಶ್ವಾಸಾರ್ಹವಲ್ಲ: ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ

Update: 2018-05-27 14:44 GMT

ಬೆಂಗಳೂರು, ಮೇ 27: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ)ಮೂಲಕ ಚುನಾವಣೆ ಪ್ರಕ್ರಿಯೆ ಸೂಕ್ತ ರೀತಿಯಲ್ಲಿ ನಡೆದು, ದಿಟ್ಟ ಫಲಿತಾಂಶ ಬರಲಿದೆ ಎನ್ನುವ ವಿಶ್ವಾಸ ನನ್ನಲ್ಲಿಲ್ಲ ಎಂದು ಬಿಜೆಪಿಯ ಮಾಜಿ ನಾಯಕ ಯಶವಂತ್ ಸಿನ್ಹಾ, ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಶಾಸಕರ ಭವನ ಸಭಾಂಗಣದಲ್ಲಿ ಪ್ರಜಾತಂತ್ರ ಉಳಿಸಲು ಪ್ರಗತಿಪರರ ವೇದಿಕೆ ಆಯೋಜಿಸಿದ್ದ, ‘ಪ್ರಜಾಪ್ರಭುತ್ವ-ಸಂವಿಧಾನ ಅಪಾಯ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇವಿಎಂ ಹ್ಯಾಕ್ ಮಾಡಬಹುದು ಎಂದು ಈಗಾಗಲೇ ತಂತ್ರಜ್ಞಾನದಲ್ಲಿ ಮುಂದುವರೆದ ದೇಶಗಳೇ ಹೇಳಿವೆ. ಆದರೆ, ಇದನ್ನು ಕೇಂದ್ರ ಚುನಾವಣೆ ಆಯೋಗ ಒಪ್ಪಿಕೊಳ್ಳುತ್ತಿಲ್ಲ, ಬದಲಾಗಿ ಆರೋಪ ಸಾಬೀತು ಮಾಡುವಂತೆ ಸವಾಲು ಹಾಕಿದೆ ಎಂದರು.

ಕಳೆದ ನಾಲ್ಕು ವರ್ಷಗಳಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯ ಎದುರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸ್ಥೆಗಳ ಮೇಲೆ ದಾಳಿಯಾಗುತ್ತಿದೆ. ಸಂಸತ್ ಎಂಬುದು ತಮಾಷೆಯಾಗಿ ಪರಿಣಮಿಸಿದ್ದು, ಬಜೆಟ್ ಮಂಡನೆಗೆ ವಿಪಕ್ಷಗಳು ವಿರೋಧ ವ್ಯಕ್ತ ಪಡಿಸುವಾಗ ಪ್ರಧಾನಿ ಒಂದೇ ಒಂದು ಸಾರಿ ವಿಪಕ್ಷದ ನಾಯಕರೊಡನೆ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಿಸುವ ಕಾರ್ಯ ಮಾಡಲಿಲ್ಲ ಎಂದು ಆರೋಪಿಸಿದರು.

ಪ್ರಮುಖ ಬಜೆಟ್‌ನ ಮೊದಲ ಭಾಗ ಯಾವತ್ತೂ ಚಿಕ್ಕದಾಗಿರುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿದ್ದ ಕಾಲದಲ್ಲಿ ಸಂಸತ್ ಕಲಾಪಗಳಿಗೆ ವಿಪಕ್ಷಗಳು ಅಡ್ಡಿಪಡಿಸದಂತೆ ಕಠಿಣ ನಿರ್ದೇಶನ ನೀಡುತ್ತಿದ್ದರು. ಹಾಗಾಗಿ ನಾವು ಅವಿಶ್ವಾಸ ಗೊತ್ತುವಳಿ ಸೇರಿದಂತೆ ಇತರ ಚರ್ಚೆಗಳನ್ನು ವಿಪಕ್ಷಗಳ ಬೇಡಿಕೆಯಂತೆ ನಡೆಸಿಕೊಡುತ್ತಿದ್ದೆವು ಎಂದು ಯಶವಂತ್ ಸಿನ್ಹಾ ನುಡಿದರು.

ಸ್ಪಷ್ಟ ಸಂದೇಶ: ರಾಜ್ಯ ವಿಧಾನಸಭೆ ಚುನಾವಣೆ ನಂತರ ಜ್ಯಾತ್ಯತೀತ ಪಕ್ಷಗಳು ಒಂದಾಗಿ ಸರಕಾರ ರಚನೆ ಮಾಡಿರುವುದರಿಂದ ದೇಶದ ರಾಜಕೀಯಕ್ಕೆ ಸ್ಪಷ್ಟ ಸಂದೇಶ ಹೋಗಿದೆ. ಅಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಶೇ. 31ರಷ್ಟು ಮತಗಳನ್ನು ಪಡೆದಿತ್ತು. ಶೇ.69ರಷ್ಟು ಮತ ಅವರ ವಿರುದ್ಧವಾಗಿತ್ತು. ವಿಪಕ್ಷಗಳೆಲ್ಲವೂ ಒಗ್ಗೂಡಿದರೆ ಕೇಂದ್ರದಲ್ಲಿ ಜ್ಯಾತ್ಯತೀತ ಸರಕಾರ ಖಚಿತ ಎಂದರು.

ಇಂದು ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಸಂವಹನ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲಾಗುತ್ತಿದೆ. ವಿಶೇಷವಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಅಪಾಯಕರವಾದುದು ಎಂದ ಅವರು, ಪ್ರತಿಯೊಬ್ಬರು ದಯವಿಟ್ಟು ಧೈರ್ಯದಿಂದ ಮಾತನಾಡಿ ಈ ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಕರೆ ನೀಡಿದರು.

ವಿಚಾರ ಸಂಕಿರಣದಲ್ಲಿ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ದಲಿತ ಮುಖಂಡ ಲಕ್ಷ್ಮೀನಾರಾಯಣ ನಾಗವಾರ, ಮಾಜಿ ಶಾಸಕ ಬಿ.ಆರ್.ಪಾಟೀಲ್, ಕಾಂಗ್ರೆಸ್ ಹಿರಿಯ ನಾಯಕ ಬಿ.ಎಲ್.ಶಂಕರ್, ಎಂ.ಬಿ.ನಾಡೇಗೌಡ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News