ಕರ್ನಾಟಕ ಬಂದ್‌ಗೆ ಬಿಜೆಪಿ ಕರೆ ಹಿನ್ನೆಲೆ: ಸೂಕ್ತ ಭದ್ರತೆ ಕೈಗೊಳ್ಳುವಂತೆ ಡಿಜಿಪಿ ಸೂಚನೆ

Update: 2018-05-27 15:04 GMT

ಬೆಂಗಳೂರು, ಮೇ 27: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡದಿದ್ದಲ್ಲಿ, ಮೇ 28 ರಂದು ಕರ್ನಾಟಕ ಬಂದ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೂಚಿಸಿದ್ದಾರೆ.

ರಾಜ್ಯದ ಎಲ್ಲ ನಗರಗಳ ಪೊಲೀಸ್ ಆಯುಕ್ತರು, ವಲಯಗಳ ಐಜಿಪಿ ಮತ್ತು ಜಿಲ್ಲಾ ಎಸ್ಪಿಗಳಿಗೆ ಭದ್ರತೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಬಂದ್‌ಗೆ ಕರೆ ನೀಡುವುದು ಸುಪ್ರೀಂ ಕೋಟ್ ಮತ್ತು ಹೈಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಗತ್ಯ ಭದ್ರತೆ ಕೈಗೊಳ್ಳುವಂತೆ ಆದೇಶ ಪತ್ರ ರವಾನಿಸಿದ್ದಾರೆ.

ಕಟ್ಟೆಚ್ಚರ: ಬಿಜೆಪಿ ಪ್ರಾಬಲ್ಯವಿರುವ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಎಡಿಜಿಪಿ ಕಮಲ್‌ಪಂತ್ ತಿಳಿಸಿದ್ದಾರೆ.

ಪ್ರತಿಭಟನೆ, ಧರಣಿಗಳ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಮೀಸಲು ಪಡೆ, ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ದಳದ ತುಕಡಿಗಳನ್ನು ರವಾನಿಸಲಾಗಿದ್ದು, ಸ್ಥಳೀಯ ಪೊಲೀಸರೊಂದಿಗೆ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News