×
Ad

ಸಿಎಂ ಕುಮಾರಸ್ವಾಮಿ ಭೇಟಿಯಾದ ನಟ ಶಿವರಾಜ್‌ಕುಮಾರ್ ದಂಪತಿ

Update: 2018-05-27 20:37 IST

ಬೆಂಗಳೂರು, ಮೇ 27: ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು, ಚಿತ್ರನಟ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ದಂಪತಿ ಭೇಟಿ ಮಾಡಿ ಶುಭ ಕೋರಿದರು.

ರವಿವಾರ ಇಲ್ಲಿನ ಜೆಪಿ ನಗರದಲ್ಲಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್ ದಂಪತಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಕೆಲಕಾಲ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್, ಕುಮಾರಸ್ವಾಮಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಅವರ ಭೇಟಿ ಮಾಡುತ್ತಿದ್ದೇವೆ. ಅವರು ಎರಡನೆ ಬಾರಿ ಸಿಎಂ ಆಗಿದ್ದು, ಮೊದಲಿನಿಂದಲೂ ನಮ್ಮ ಹಾಗೂ ಗೌಡರ ಕುಟುಂಬದ ಮಧ್ಯೆ ಆತ್ಮೀಯತೆ ಇದೆ ಎಂದರು.

ಲೋಕಸಭೆ ಚುನಾವಣೆಗೆ ಇನ್ನೂ ಸಮಯವಿದೆ. ಪತ್ನಿ ಗೀತಾ ಈ ಬಾರಿ ಜೆಡಿಎಸ್ ಪರ ಪ್ರಚಾರ ಮಾಡಿದ್ದಾರೆಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಾಂತರ ಸಂಬಂಧ ಹಿರಿಯ ನಟ ಅಂಬರೀಶ್ ಸಮಾಲೋಚನೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಂಶಯ ಬೇಡ : ತನ್ನ ಹಾಗೂ ಶಿವಕುಮಾರ್ ಅವರ ಭೇಟಿಯೊಂದು ಸೌಜನ್ಯದ ಭೇಟಿಯಷ್ಟೇ. ಈ ಬಗ್ಗೆ ಯಾರೊಬ್ಬರಿಗೂ ಅನುಮಾನ ಬೇಡ. ತಾನೂ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಬಂದು ಶುಭಕೋರಿದ್ದಾರೆಂದು ಕುಮಾರಸ್ವಾಮಿ ಹೇಳಿದರು.

ಬುಲಾವ್ ಬಂದಿಲ್ಲ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ. ಯಾರೂ ಈ ಬಗ್ಗೆ ಅಪಾರ್ಥ ಮಾಡಿಕೊಳ್ಳಬಾರದು ಎಂದ ಅವರು, ರಾಹುಲ್ ಗಾಂಧಿ ಕರೆದರೂ ಹೋಗಲಿಲ್ಲ ಎಂದು ಕೆಲವರು ರಾಜಕೀಯ ಬಣ್ಣ ಕಟುತ್ತಾರೆ ಎಂದರು.

ಶನಿವಾರ ರಾತ್ರಿ ದೂರವಾಣಿ ಮೂಲಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆ. ರಾಹುಲ್ ಗಾಂಧಿ ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದು, ತಾನೂ ಶುಭ ಕೋರಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದು, ಏಕಾಏಕಿ ಸಾಲಮನ್ನಾ ನಿರ್ಧಾರ ಕೈಗೊಳ್ಳಲು ಕಷ್ಟಸಾಧ್ಯ. ಶನಿವಾರ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವುದು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಹಾದಿ ಹಿಡಿಯಬಾರದು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News