ಐಸಿಸಿ ತನಿಖೆಯ ನಂತರವೇ ಕ್ರಮ ಜಾರಿ; ಬಿಸಿಸಿಐ

Update: 2018-05-27 18:37 GMT

ಹೊಸದಿಲ್ಲಿ, ಮೇ 27: ಭಾರತ ತಂಡವನ್ನೊಳಗೊಂಡ ಮೂರು ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಪಿಚ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ಆರೋಪದ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆಯಿಡಲು ನಿರ್ಧರಿಸಿರುವ ಬಿಸಿಸಿಐ ಈ ಪ್ರಕರಣದಲ್ಲಿ ಆರೋಪಿತನಾಗಿರುವ ಮಾಜಿ ಕ್ರಿಕೆಟಿಗ ರಾಬಿನ್ ಮೊರಿಸ್ ವಿರುದ್ಧ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಡೆಸುತ್ತಿರುವ ತನಿಖೆಯ ವರದಿ ಬಂದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ. ವಾಹಿನಿಯೊಂದು ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಭಾರತ ಮತ್ತು ಶ್ರೀಲಂಕಾ(ಗಾಲೆ, ಜುಲೈ 26-29,2017), ಭಾರತ ಮತ್ತು ಆಸ್ಟ್ರೇಲಿಯ (ರಾಂಚಿ, ಮಾರ್ಚ್ 16-20, 2017) ಮತ್ತು ಭಾರತ ಮತ್ತು ಇಂಗ್ಲೆಂಡ್ (ಚೆನ್ನೈ, ಡಿಸೆಂಬರ್ 16-20,2016) ಪಂದ್ಯಗಳ ವೇಳೆ ಪಿಚ್ ಫಿಕ್ಸಿಂಗ್ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಪೈಕಿ ಮೊದಲ ಮತ್ತು ಮೂರನೇ ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ರ ಡ್ರಾದಲ್ಲಿ ಕೊನೆಯಾಗಿತ್ತು. ನಮ್ಮ ಪ್ರಕಾರ ಐಸಿಸಿ ಈಗಾಗಲೇ ತನಿಖೆ ಆರಂಭಿಸಿದೆ. ಮೊದಲು ಅವರು ತನಿಖೆಯನ್ನು ಮುಗಿಸಿ ಮೊರಿಸ್ ತಪ್ಪಿತಸ್ಥ ಎಂದು ತಿಳಿಸಲಿ. ಅವರ ತೀರ್ಪು ಕೈಗೆ ಸಿಕ್ಕ ನಂತರವೇ ಬಿಸಿಸಿಐ ಮುಂದಿನ ಕ್ರಮ ಜರುಗಿಸಲಿದೆ ಎಂದು ಬಿಸಿಸಿಐಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 42 ಮೊದಲ ದರ್ಜೆ ಪಂದ್ಯಗಳು ಮತ್ತು 51 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಮೊರಿಸ್ ಸದ್ಯ ಬಿಸಿಸಿಐನ ಯಾವುದೇ ಯೋಜನೆ ಜೊತೆ ಸಂಬಂಧ ಹೊಂದಿಲ್ಲ. ಸಂಶಯಿತರ ಪಟ್ಟಿಯಲ್ಲಿ ಮೊರಿಸ್ ಹೆಸರು ಇದೆಯೇ ಎಂಬ ಕುರಿತು ಭ್ರಷ್ಟಾಚಾರನಿಗ್ರಹ ವಿಭಾಗದಲ್ಲಿ ವಿಚಾರಿಸಬೇಕಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಾಹಿನಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ರಾಬಿನ್ ಮೊರಿಸ್ ಗಾಲೆಯ ಕ್ಯುರೇಟರ್ ತರಂಗಾ ಇಂಡಿಕಾರನ್ನು ಮಾರುವೇಷದಲ್ಲಿರುವ ವಾಹಿನಿಯ ವರದಿಗಾರರಿಗೆ ಭೇಟಿ ಮಾಡಿಸುತ್ತಿರುವುದು ಮತ್ತು ಮ್ಯಾಚ್ ಫಿಕ್ಸರ್‌ಗಳು ಬಯಸಿದಂತೆ ಪಿಚ್ಚನ್ನು ಸಿದ್ಧಪಡಿಸುವ ಬಗ್ಗೆ ಮಾಹಿತಿ ನೀಡುವುದನ್ನು ಕಾಣಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News