4ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮಗುವನ್ನು ‘ಸ್ಪೈಡರ್ ಮ್ಯಾನ್’ನಂತೆ ರಕ್ಷಿಸಿದ ಯುವಕ!

Update: 2018-05-28 06:40 GMT

ಪ್ಯಾರಿಸ್, ಮೇ 28: ಅಪಾರ್ಟ್ ಮೆಂಟ್ ಕಟ್ಟಡವೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮತ್ತಾಗಿ ಜಾರಿ ಅದರ ಅಂಚಿನಲ್ಲಿ ಅಪಾಯಕಾರಿಯಾಗಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವೊಂದನ್ನು ಯುವಕನೊಬ್ಬ ಏಕಾಂಗಿಯಾಗಿ ಕಟ್ಟಡದ ಹೊರಭಾಗದಿಂದ ‘ಸ್ಪೈಡರ್ ಮ್ಯಾನ್’ನಂತೆ ಏರಿ ರಕ್ಷಿಸಿದ್ದಾನೆ.

ತನ್ನ ಸುರಕ್ಷತೆಯನ್ನೇ ಲೆಕ್ಕಿಸದೆ ಯುವಕ ಮಮೌದೌ ಗಸ್ಸಮ ಕೆಲವೇ ಸೆಕೆಂಡುಗಳಲ್ಲಿ ಕಟ್ಟಡವನ್ನೇರಿ ಮಗುವನ್ನು ರಕ್ಷಿಸಿದ ಘಟನೆ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಕ್ಷಗಟ್ಟಲೆ ಜನ ಈ ವೀಡಿಯೋ ವೀಕ್ಷಿಸಿ ಆ ಯುವಕನ ಚಾಕಚಕ್ಯತೆ ಮತ್ತು ಸಮಯಪ್ರಜ್ಞೆಯನ್ನು ಕಂಡು ಮೂಗಿನ ಮೇಲೆ ಬೆರಳಿರಿಸಿದ್ದಾರೆ. ಇಷ್ಟೇ ಅಲ್ಲದೆ ಪ್ಯಾರಿಸ್ ನ ಸ್ಪೈಡರ್ ಮ್ಯಾನ್ ಎಂದೇ ಈತ ಪ್ರಸಿದ್ಧನಾಗಿದ್ದಾನೆ.

ಘಟನೆ ಉತ್ತರ ಪ್ಯಾರಿಸ್ ನಲ್ಲಿ ರಾತ್ರಿ ಸುಮಾರು 8 ಗಂಟೆಗೆ ನಡೆದಿದೆಯೆನ್ನಲಾಗಿದೆ. ಬರಿಗೈಯ್ಯಲ್ಲಿ ಒಂದು ಬಾಲ್ಕನಿಯಿಂದ ಇನ್ನೊಂದು ಬಾಲ್ಕನಿಗೆ ಜಿಗಿದು ನಾಲ್ಕನೇ ಮಹಡಿಗೆ ಹತ್ತುವ ಯುವಕ, ನೇತಾಡುತ್ತಿದ್ದ ಮಗುವನ್ನು ತನ್ನ ಬಲಗೈಯ್ಯಿಂದ ಹಿಡಿದುಕೊಳ್ಳುತ್ತಾನೆ.

ಸುದ್ದಿ ತಿಳಿದು ಅಗ್ನಿಶಾಮಕ ದಳ ಅಲ್ಲಿಗೆ ಆಗಮಿಸುವಷ್ಟರಲ್ಲಿ ಮಗುವನ್ನು ಯುವಕ ರಕ್ಷಿಸಿದ್ದ. ಯುವಕನ ಸಾಹಸವನ್ನು ಮೆಚ್ಚಿರುವ ಪ್ಯಾರಿಸ್ ಮೇಯರ್ ಆನ್ನೆ ಹಿಡಾಲ್ಗೊ ಆತನಿಗೆ ಕರೆ ಮಾಡಿ ಹಾಡಿಹೊಗಳಿದ್ದಾರೆ. ಕೆಲ ಸಮಯದ ಹಿಂದೆಯಷ್ಟೇ ಬಾಲಿಯಿಂದ ಪ್ಯಾರಿಸ್ ಗೆ ಈತ ಆಗಮಿಸಿದ್ದನೆನ್ನಲಾಗಿದೆ. ಘಟನೆ ನಡೆದಾಗ ಮಗುವಿನ ಹೆತ್ತವರು ಮನೆಯಲ್ಲಿರಲಿಲ್ಲವೆನ್ನಲಾಗಿದೆ. ಮಗುವಿನ ತಾಯಿ ಪ್ಯಾರಿಸ್ ನಗರದಿಂದ ಹೊರ ಹೋಗಿದ್ದರೆ ಮನೆಯಲ್ಲಿದ್ದ  ತಂದೆ ಕೂಡ ಘಟನೆ ನಡೆದ ಸಂದರ್ಭ ಎಲ್ಲೋ ಹೊರ ಹೋಗಿದ್ದನೆನ್ನಲಾಗಿದೆ. ಅಜಾಗರೂಕತೆ ತೋರಿದ ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News