ಧರ್ಮಾಧ್ಯಕ್ಷರ ನೇಮಕಕ್ಕೆ ವಿರೋಧ: ಡಾ.ಪೀಟರ್ ಪದಗ್ರಹಣ ಬಹಿಷ್ಕರಿಸಿ ಪ್ರತಿಭಟನೆ
ಬೆಂಗಳೂರು, ಮೇ 28: ಕೊಂಕಣಿ ಸಮುದಾಯಕ್ಕೆ ಸೇರಿರುವ ಡಾ.ಪೀಟರ್ ಮೊಚಾಡೊರನ್ನು ಕ್ರೈಸ್ತ ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಹಾಗೂ ಅವರ ಪದಗ್ರಹಣ ಖಂಡಿಸಿ ಮೇ 31 ರಂದು ಅಖಿಲ ಕರ್ನಾಟಕ ಕೆಥೋಲಿಕ ಕ್ರೈಸ್ತರ ಕನ್ನಡ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್, ಕೊಂಕಣಿ ಸಮುದಾಯಕ್ಕೆ ಸೇರಿದ ಧರ್ಮಗುರುಗಳು ಕನ್ನಡಿಗರನ್ನು ಶೋಷಣೆ ಮಾಡುತ್ತಿದ್ದಾರೆ. ಇದನ್ನು ಮೇಲಿನ ಧರ್ಮಗುರುಗಳಿಗೆ ಹಲವಾರು ಬಾರಿ ಮನವರಿಕೆ ಮಾಡಿಕೊಟ್ಟರೂ, ಪದೇ ಪದೇ ಅವರನ್ನೇ ನೇಮಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಧರ್ಮಗುರುಗಳಾಗಿ ಈ ಹಿಂದೆ ನೇಮಕವಾಗಿದ್ದ ಆರ್ಚ್ ಬಿಷಪ್ ಅಲ್ಫೋನ್ಸ್ ಚರ್ಚ್‌ಗಳ ಆಸ್ತಿಯನ್ನು ಮಾರಾಟ ಮಾಡಿಕೊಂಡಿದ್ದರು. ಅನಂತರ ಬಂದ ಇಗ್ನೇಷಿಯಸ್ ಪಿಂಟೋ ಭಾಷಾ ಆಧಾರದ ಮೇಲೆ ಸಮುದಾಯವನ್ನು ಒಡೆದು, ಚರ್ಚ್‌ಗಳ ಆಸ್ತಿ ಮಾರಾಟ ಮಾಡಿ ನಂಬಿಕೆ ದ್ರೋಹ ಮಾಡಿದರು. ಇವನ ನಂತರ ನೇಮಕಗೊಂಡ ಆರ್ಚ್‌ಬಿಷಪ್ ಡಾ.ಬರ್ನಾರ್ಡ್ ಮೊರಾಸ್ ಆಡಳಿತ ವೇಳೆ ಸೇಡು, ದ್ವೇಷ, ಅಹಂಕಾರ, ವಂಚನೆ ತತ್ವಗಳನ್ನು ಪಾಲಿಸಿದ್ದಾರೆ. ಅಲ್ಲದೆ, ಇವರ ಭೂ ಮಾಫಿಯಾ ವಿರುದ್ಧ ಮಾತನಾಡಿದ ಫಾ.ಥಾಮಸ್‌ರ ಮೇಲೆ ಕೊಲೆ ಆರೋಪ ಹೊರಿಸಿದ್ದರು ಎಂದು ಅವರು ಕಿಡಿಕಾರಿದರು.
ಕೊಂಕಣಿ ಸಮುದಾಯಕ್ಕೆ ಸೇರಿದ ಧರ್ಮಾಧ್ಯಕ್ಷರು ನಗರದಲ್ಲಿ ಸಮುದಾಯದ ಆಸ್ತಿಯನ್ನು ನಾಶ ಮಾಡುವುದರಲ್ಲಿ ಹಾಗೂ ಅದನ್ನು ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದುದರಿಂದಾಗಿ, ಈ ಬಾರಿ ನೇಮಕ ಮಾಡಿರುವ ಧರ್ಮಾಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಮೇ 31 ರಂದು ಬೆಂಗಳೂರಿನ ಕೋಲ್ಸ್ ಪಾರ್ಕ್ ಬಳಿಯಿರುವ ಕೆಥೆಡ್ರೆಲ್‌ನ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಮುಂಭಾಗದಲ್ಲಿ ಧರ್ಮಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಬಹಿಷ್ಕರಿಸಿ ಒಂದು ದಿನದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.