ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ: ಟಿಕೆಟ್‌ಗಾಗಿ ಮೂರು ಪಕ್ಷಗಳಲ್ಲಿ ಪೈಪೋಟಿ
ಬೆಂಗಳೂರು, ಮೇ 28: ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಜೂ.11ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಎದುರಾಗಿದೆ.
ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮರದ್, ರಘುನಾಥ್ ಮಲ್ಕಾಪುರೆ, ಭಾನುಪ್ರಕಾಶ್, ಕಾಂಗ್ರೆಸ್ ಪಕ್ಷದ ಎಂ.ಆರ್.ಸೀತಾರಾಂ, ಸಿ.ಎಂ.ಇಬ್ರಾಹೀಂ, ಮೋಟಮ್ಮ, ಕೆ.ಗೋವಿಂದರಾಜು, ಜೆಡಿಎಸ್ ಪಕ್ಷದ ಸೈಯದ್ ಮುದೀರ್ ಆಗಾ ಹಾಗೂ ಪಕ್ಷೇತರ ಸದಸ್ಯ ಭೈರತಿ ಸುರೇಶ್ ಅವರಿಂದ ತೆರವಾಗಲಿರುವ ಸ್ಥಾನಗಳಿಗೆ ಜೂ.11ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಗೆ ಮೇ 31 ಅಂತಿಮ ದಿನವಾಗಿದೆ. ವಿಧಾನಸಭೆಯ ಹಾಲಿ ಸದಸ್ಯರ ಸಂಖ್ಯಾಬಲ 220 ಇದೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ 20 ಮತಗಳ ಅಗತ್ಯವಿದೆ. 104 ಸದಸ್ಯರನ್ನು ಹೊಂದಿರುವ ಬಿಜೆಪಿ, ಐದು ಸ್ಥಾನಗಳನ್ನು ಗೆಲ್ಲುವ ಅವಕಾಶವಿದೆ. 78 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ 3 ಸ್ಥಾನಗಳನ್ನು ಸುಲಭವಾಗಿ ಪಡೆಯಲಿದೆ.
38 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಹಾಗೂ ಬಿಎಸ್ಪಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಬಳಿಕ ಉಳಿತಾಯವಾಗುವ 18 ಹೆಚ್ಚುವರಿ ಮತಗಳನ್ನು ಹಾಗೂ ಪಕ್ಷೇತರ ಇಬ್ಬರು ಸದಸ್ಯರ ಬೆಂಬಲದೊಂದಿಗೆ ಎರಡನೆ ಸ್ಥಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಪಕ್ಷ ನಾಲ್ಕನೆ ಸ್ಥಾನವನ್ನು ಪಡೆಯಲು ದ್ವಿತೀಯ ಪ್ರಾಶಸ್ತ್ರ ಮತಗಳ ಮೊರೆ ಹೋಗಲಿದೆ. ಒಟ್ಟಾರೆ, ಬಿಜೆಪಿ ಐದು, ಕಾಂಗ್ರೆಸ್ ನಾಲ್ಕು ಹಾಗೂ ಜೆಡಿಎಸ್ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಪಡೆಯಲಿವೆ.
ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಹೆಸರು ಅಂತಿಮಗೊಂಡಿದ್ದು, ಎರಡನೆ ಸ್ಥಾನಕ್ಕೆ ಮಾಜಿ ಶಾಸಕ ವೈಎಸ್‌ವಿ ದತ್ತ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಇನ್ನಿತರರು ಆಕಾಂಕ್ಷಿಗಳಾಗಿದ್ದು, ಈ ಪೈಕಿ ವೈಎಸ್‌ವಿ ದತ್ತ ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗಿದೆ.