×
Ad

ಚಿತ್ರ ಕಲಾವಿದನಿಗೆ ಸಹಿ ಬಹಳ ಮುಖ್ಯ: ಡಾ.ಆರ್.ಎಚ್ ಕುಲಕರ್ಣಿ

Update: 2018-05-28 18:25 IST

ಬೆಂಗಳೂರು, ಮೇ 28: ಚಿತ್ರ ಕಲಾವಿದ ಎಷ್ಟೇ ಪ್ರಸಿದ್ದಿ ಪಡೆದರೂ ಸಹ ತನ್ನ ಕಲಾಕೃತಿಯ ಮೇಲೆ ಮಾಡುವ ಸಹಿ ಬಹಳ ಮುಖ್ಯವಾಗುತ್ತದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಕಲಾ ಇತಿಹಾಸಕಾರ ಡಾ.ಆರ್.ಎಚ್. ಕುಲಕರ್ಣಿ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ ‘ತಿಂಗಳ ಚಿತ್ರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಿದ್ಧ ಕಲಾವಿದ ಎಂ.ಎಫ್.ಹುಸೇನ್ ವಿಶ್ವವಿಖ್ಯಾತ ಕಲಾವಿದ. ಆದರೆ, ಅವರ ಕಲಾಕೃತಿಗಳನ್ನು ಗುರುತಿಸಲು ಗೊಂದಲವಾಗುತ್ತದೆ. ಏಕೆಂದರೆ ಅವರು ನಾಲ್ಕೈದು ಬಗೆಯಲ್ಲಿ ಸಹಿ ಮಾಡುತ್ತಿದ್ದರು ಎಂದರು.

ವಿಶ್ವ ವಿಖ್ಯಾತ ಕಲಾವಿದ ರವಿವರ್ಮನ ಕಲಾಕೃತಿಗಳನ್ನು ಗುರುತಿಸುವುದು ಬಹಳ ಸುಲಭ. ಏಕೆಂದರೆ, ಅವರು ತಮ್ಮ ಕಲಾಕೃತಿಗಳ ಮೇಲೆ ಒಂದೇ ಶೈಲಿಯಲ್ಲಿ ಸಹಿ ಮಾಡಿದ್ದಾರೆ. ಹೀಗಾಗಿ, ಅವರ ಕೃತಿಗಳನ್ನು ಗುರುತಿಸಲು ಗೊಂದಲವಾಗುವುದಿಲ್ಲ ಎಂದು ಅವರು ತಿಳಿಸಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷೆ ಎಂ.ಜೆ.ಕಮಲಾಕ್ಷಿ ಮಾತನಾಡಿ, ಸಾಂಪ್ರದಾಯಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅನುಭವಿ ಚಿತ್ರ ಕಲಾವಿದರು ಹಾಗೂ ಸಮಕಾಲೀನ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಿಕೊಂಡು ವಿಚಾರ ವಿನಿಮಯ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಯುವ ಕಲಾವಿದರಿಗೆ ಸಲಹೆ, ಮಾರ್ಗದರ್ಶನಗಳು ಬಹಳ ಮುಖ್ಯ. ಹೀಗಾಗಿ, ಹಿರಿಯರ ಸಲಹೆ ಪಡೆದು ಸಾಂಪ್ರದಾಯಿಕ ಕಲೆಯನ್ನು ಕಲಿತು. ಸಾಂಪ್ರದಾಯಿಕ ಕಲೆಗಳನ್ನು ಉಳಿಸುವುದರ ಜೊತೆಗೆ ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕೆಂದು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಳಗಾವಿಯ ಲಕ್ಕಪ್ಪ ಎಂಡ್ರಾವಿ, ಕಲಬುರ್ಗಿಯ ವೀರೇಶ್ ಎಸ್.ಗೊಲ್ಲದ್ , ಅವಿನಾಶ, ಬೆಂಗಳೂರಿನ ಪುಷ್ಪಾ ಕೆ.ಆರ್. ಬಿಡಿಸಿರುವ ತೈಲವರ್ಣ, ಜಲವರ್ಣದ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕರ್ನಾಟಕ ಲಲಿತ ಕಲಾ ಅಕಾಡೆಮಿ ರಿಜಿಸ್ಟಾರ್ ಇಂದ್ರಮ್ಮ ಎಚ್.ವಿ. ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News