‘ಯಡಿಯೂರಪ್ಪ ಬಂದ್ ರಾಜಕೀಯ ಬಿಟ್ಟು, ಸಮಾಲೋಚನೆ ನಡೆಸಲಿ’
Update: 2018-05-28 18:27 IST
ಬೆಂಗಳೂರು, ಮೇ 28: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರ್ನಾಟಕ ಬಂದ್ ರಾಜಕೀಯ ಬಿಟ್ಟು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಲು ಮುಂದಾಗಬೇಕು. ಆಗ ಮಾತ್ರ ರೈತರ ಪರ ನಿಲುವು ಸಾಬೀತುಪಡಿಸಲು ಸಾಧ್ಯ ಎಂದು ಕೆಪಿಸಿಸಿ ಕಿಸಾನ್ ಘಟಕ ಅಧ್ಯಕ್ಷ ಸಚಿನ್ ಮೀಗಾ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಂಪೂರ್ಣ ಸಾಲ ಮನ್ನಾ ವಿಚಾರ ಸಂಬಂಧ ಬಿಜೆಪಿ ನಾಯಕರು ರಾಜ್ಯ ಬಂದ್ ಮಾಡುವ ಬದಲು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲಿ. ಕೇವಲ 54 ಸಾವಿರ ಕೋಟಿ ಮಾತ್ರವಲ್ಲ, ಬೆಳೆ ಸಾಲ ಸೇರಿ ಒಟ್ಟು 1.14 ಲಕ್ಷ ಕೋಟಿ ರೂ. ಸಾಲ ಇದೆ ಎಂದು ತಿಳಿಸಿದರು.
ಸರಕಾರಗಳು ರೈತರ ಸಾಲ ಮನ್ನಾ ಮಾಡಬೇಕು. ಅದಕ್ಕಾಗಿಯೇ ನಾವು ರಾಜ್ಯಾದ್ಯಂತ ಅಧ್ಯಯನ ನಡೆಸಿದ್ದು, ಮೇ 29 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಗೆ ವರದಿ ನೀಡುತ್ತೇವೆ ಎಂದು ಅವರು ಹೇಳಿದರು.