ರೈತರ ಸಾಲ ಮನ್ನಾ ವಿಚಾರದಲ್ಲಿ ಪಲಾಯನವಿಲ್ಲ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು/ಹೊಸದಿಲ್ಲಿ, ಮೇ 28: ರೈತರ ಸಾಲವನ್ನು ಯಾವ ರೀತಿಯಲ್ಲಿ ಮನ್ನಾ ಮಾಡಬೇಕು ಎಂಬುದರ ಕುರಿತು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಸಂಬಂಧ ಬುಧವಾರ ಬೆಂಗಳೂರಿನಲ್ಲಿ ಎಲ್ಲಾ ವಿಚಾರಗಳನ್ನು ನಾಡಿನ ಜನತೆ ಮುಂದಿಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲ ಮನ್ನಾ ಮಾಡುವುದಕ್ಕೆ ಕನಿಷ್ಠ ಸಮಯ ಕೊಡಬೇಕಲ್ಲವೇ, ಉಸಿರಾಡುವುದಕ್ಕೂ ಸಮಯ ಕೊಡಬೇಕಲ್ಲವೇ ಎಂದು ಪ್ರಶ್ನಿಸಿದರು.
ನಿನ್ನೆ ನಾಲ್ಕು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ. ಆ ಕುಟುಂಬಗಳನ್ನು ಉಳಿಸುವವರು ಯಾರು. ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಯೂಟರ್ನ್, ರೈಟ್ ಟರ್ನ್ ಎಂದು ಚರ್ಚೆ ಮಾಡಲಾಗುತ್ತಿದೆ. ಇದು ಸಮ್ಮಿಶ್ರ ಸರಕಾರವಾಗಿರುವುದರಿಂದ ಕಾಂಗ್ರೆಸ್ ಜೊತೆ ಚರ್ಚೆ ಮಾಡಬೇಕೆಂದು ಹೇಳಿದ್ದೇನೆ. ಅದನ್ನೇ ಯಾಕೆ ಈ ರೀತಿ ಪ್ರಚಾರ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ರೈತರ ವಿಚಾರದಲ್ಲಿ ಸುಮ್ಮನೆ ಕೂರಲು ನಾನು ಯಡಿಯೂರಪ್ಪ ಅಲ್ಲ. ಸಾಲ ಮನ್ನಾ ಮಾಡಲು ಯಾವ ಮಾರ್ಗಸೂಚಿಗಳನ್ನು ಸಿದ್ಧಪಡಿಸಿಕೊಂಡಿದ್ದೇನೆ ಎಂಬುದನ್ನು ಜನತೆಯ ಮುಂದಿಡುತ್ತೇನೆ. ರೈತರು ಬಿಜೆಪಿಯ ಕುತಂತ್ರದ ರಾಜಕಾರಣಕ್ಕೆ ಬಲಿಯಾಗಬಾರದು ಎಂದು ಅವರು ಹೇಳಿದರು.
ಕೇವಲ ರೈತರ ಸಾಲ ಮನ್ನಾ ಅಷ್ಟೇ ಅಲ್ಲ, ಹಲವಾರು ಸಮಸ್ಯೆಗಳಿಗೂ ಪರಿಹಾರ ಕಂಡು ಕೊಳ್ಳಬೇಕಿದೆ. ನಾನು ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿರುತ್ತೇನೆಯೋ ಅಲ್ಲಿಯವರೆಗೆ ಇದು ಸಮ್ಮಿಶ್ರ ಸರಕಾರವಾಗಿದ್ದರೂ ಜನಸ್ನೇಹಿ ಸರಕಾರವಾಗಿರಲಿದೆ. ಯಾರೂ ಆತಂಕ, ಅನುಮಾನಕ್ಕೆ ಒಳಗಾಗುವ ಅಗತ್ಯವಿಲ್ಲ. ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನಡೆಸಲು ಪ್ರತಿಕ್ಷಣ ಶ್ರಮಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ರಾಜ್ಯದ ಜನತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಾನು, ಜನತೆ ಅನ್ಯಾಯ ಮಾಡುವ ಪ್ರಶ್ನೆಯೇ ಇಲ್ಲ. ಆ ಬದ್ಧತೆ ನನಗೆ ಇದೆ. ಈ ಬಗ್ಗೆ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ನಾನು ರಾಜಕಾರಣದಲ್ಲೇ ಇರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಧಾನಿ ನರೇಂದ್ರಮೋದಿಯನ್ನು ಭೇಟಿ ಮಾಡಿ, ಸುದೀರ್ಘವಾಗಿ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಅವರ ಸಹಕಾರ ಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಸ್ಪರ ವಿಶ್ವಾಸದಿಂದ ಮುಂದುವರೆಯುವ ಸಂಬಂಧ ಅವರ ಸಹಕಾರವನ್ನು ಕೋರಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ನಮ್ಮ ರಾಜ್ಯದ ರಾಯಚೂರು, ಯರಮರಸ್, ಬಳ್ಳಾರಿಯಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಇನ್ನೆರಡು ದಿನಗಳಿಗಾಗುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು ಇದೆ. ಆದುದರಿಂದ, ತಕ್ಷಣವೇ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಸರಬರಾಜು ಮಾಡಲು ಕಲ್ಲಿದ್ದಲು ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಗುಜರಾತ್ ರಾಜ್ಯದ ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಅನುಭವವನ್ನು ಹೊಂದಿರುವ ನರೇಂದ್ರಮೋದಿ, ರಾಜಕಾರಣದಲ್ಲಿ ಯಾವ ರೀತಿಯಲ್ಲಿ ಮುಂದುವರೆಯಬೇಕು ಎಂಬುದರ ಕುರಿತು ಹಲವಾರು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಾನೀಶ್ ಅಲಿ, ಶಾಸಕ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.