ಬೆಂಗಳೂರು: ವಂಚನೆ ಆರೋಪ; ಇಂಜಿನಿಯರ್ ಬಂಧನ
ಬೆಂಗಳೂರು, ಮೇ 28: ದುಬಾರಿ ಬೆಲೆಯ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ಅವುಗಳನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಿ ಜೂಜಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ ಅಂತಾರಾಜ್ಯ ವಂಚಕ ಇಂಜಿನಿಯರ್‌ನೊಬ್ಬನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಕಾರ್ತಿಕ್ ಬಂಧಿತ ಆರೋಪಿಯಾಗಿದ್ದು, ಈತನಿಂದ 12.3 ಲಕ್ಷ ರೂ. ಮೌಲ್ಯದ 2 ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಹೇಳಿದ್ದಾರೆ.
ಸಂಪಿಗೆಹಳ್ಳಿಯ ಲೋಹಿತ್ ಸೊಂಟಕಿ ಎಂಬುವರು ರೆಂಟ್ ಶ್ರೀ ಡಾಟ್‌ಕಾಮ್ನಲ್ಲಿ ಬಾಡಿಗೆ ಕೊಡುವುದಾಗಿ ಹಾಕಿದ್ದರು. ಇದನ್ನು ನೋಡಿದ ಆರೋಪಿ ಕಾರ್ತಿಕ್, 2.76 ಲಕ್ಷ ರೂ. ಬೆಲೆಯ ಕ್ಯಾನನ್ ಡಿಜಿಟಲ್ ಕ್ಯಾಮರಾ ಹಾಗೂ 1.38 ಲಕ್ಷ ರೂ. ಬೆಲೆಯ ಎಸ್‌ಎಲ್‌ಆರ್ ಕ್ಯಾಮರಾಗಳನ್ನು ಮಾ 21 ರಂದು 3 ಸಾವಿರಕ್ಕೆ ಬಾಡಿಗೆಗೆ ಪಡೆದಿದ್ದ. ಬಳಿಕ, ಒಎಲ್‌ಎಕ್ಸ್‌ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿ ತಲೆ ಮರೆಸಿಕೊಂಡಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿದ ಸಂಪಿಗೆಹಳ್ಳಿ ಪೊಲೀಸರು, ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಕ್ಯಾಮರಾಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೇ, ಕಾರ್ತಿಕ್ ವಿರುದ್ಧ ಮುಂಬೈ ಪಶ್ಚಿಮ ಠಾಣೆ ಹಾಗೂ ಪಶ್ಚಿಮ ಬಂಗಾಳದ ಹೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಾಗಿವೆ.