×
Ad

ಬಿಬಿಎಂಪಿಯ ಗುತ್ತಿಗೆ ಕಾಮಗಾರಿಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಲು ಆಗ್ರಹ

Update: 2018-05-28 20:01 IST

ಬೆಂಗಳೂರು, ಮೇ 28: ಬಿಬಿಎಂಪಿಯಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಪರಿಶಿಷ್ಟರಿಗೆ ಸಮಾನವಾದ ಮೀಸಲಾತಿ ಕಲ್ಪಿಸಬೇಕು ಹಾಗೂ ಪ್ಯಾಕೇಜ್ ಟೆಂಡರ್ ಪದ್ಧತಿಯನ್ನು ಕೈ ಬಿಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಸರಕಾರದ ಅಥವಾ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೆತ್ತಿಕೊಳ್ಳುವ ಎಲ್ಲ ರೀತಿಯ ಕಾಮಗಾರಿಗಳಲ್ಲಿ ಮತ್ತು ಎಲ್ಲ ವಿಧವಾದ ಜಾಹೀರಾತು ಫಲಕಗಳು, ಸ್ಕೈವಾಕ್ ಮತ್ತು ಬಸ್ ಶೆಲ್ಟರ್ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ್‌ನಲ್ಲಿ ಶೇ.24.10 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ನಿಯಮ ರೂಪಿಸಲಾಗಿದೆ. ಆದರೆ, ಪಾಲಿಕೆ ಅಧಿಕಾರಿಗಳನ್ನು ಅದನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿಯಿಂದ ಸಣ್ಣಪುಟ್ಟ ಎಲ್ಲವನ್ನೂ ಸೇರಿಸಿ ಕೋಟ್ಯಾಂತರ ರೂ.ಗಳ ಮೊತ್ತದ ಕಾಮಗಾರಿಗಳನ್ನು ಪ್ಯಾಕೇಜ್ ಅಡಿಯಲ್ಲಿ ಅನುಭವ, ವಹಿವಾಟು ಹಾಗೂ ಕಠಿಣ ಸ್ಪರೂಪದ ಟೆಂಡರ್ ಷರತ್ತುಗಳನ್ನು ವಿಧಿಸಿ ಕರೆಯಲಾಗುತ್ತಿದೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.

ಜಾಹೀರಾತು ಕಾಮಗಾರಿಗಳಾದ ಸ್ಕೈವಾಕ್, ಬಸ್ ಶೆಲ್ಟರ್, ಪೋಲ್ ಕಿಯೋಸ್ಕ್, ರಸ್ತೆ ವಿಭಜಕಗಳಲ್ಲಿನ ಫಲಕಗಳು ಹಾಗೂ ಉದ್ಯಾನವನ ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿಗಳ ಗುತ್ತಿಗೆ ಟೆಂಡರ್‌ನಲ್ಲಿ ಎರಡು ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಟೆಂಡರ್ ಕರೆದು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಭಾಗವಹಿಸಲು ಅವಕಾಶ ದೊರಕದಂತೆ ಮಾಡಲಾಗುತ್ತಿದೆ ಎಂದು ದೂರಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಹಿಂದುಳಿದಿದ್ದಾರೆ. ಹೀಗಾಗಿ, ಪಾಲಿಕೆಯು ತಿಳಿಸಿರುವಂತಹ ಕಠಿಣ ಸ್ವರೂಪದ ಷರತ್ತನ್ನು ಪೂರೈಸಲು ಕಷ್ಟವಾಗುತ್ತಿದೆ. ಅದರಿಂದಾಗಿ ಪ್ಯಾಕೇಜ್ ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ಯಾಕೇಜ್ ಟೆಂಡರ್ ರದ್ಧು ಮಾಡಬೇಕು ಹಾಗೂ ಪರಿಶಿಷ್ಟರಿಗೆ ಸರಿಯಾದ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಬಿಬಿಎಂಪಿ ಮನವಿ ಸಲ್ಲಿಸಿದ್ದು, ಮುಂದಿನ 15 ದಿನಗಳೊಳಗೆ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಲಿಲ್ಲವಾದರೆ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News