ವಾರ್ಡ್ ಮರು ವಿಂಗಡಣೆ, ಮೀಸಲು ಪಟ್ಟಿ ಒದಗಿಸಲು ಕೋರಿ ಹೈಕೋರ್ಟ್‌ಗೆ ಮತ್ತೆ ಮನವಿ ಮಾಡಿದ ಚುನಾವಣಾ ಆಯೋಗ
ಬೆಂಗಳೂರು, ಮೇ 28: ರಾಜ್ಯದ ವಿವಿಧ 218 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು ಈ ಕೂಡಲೇ ತಮಗೆ ಒದಗಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ಗೆ ಮತ್ತೆ ಮನವಿ ಮಾಡಿದೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ಒದಗಿಸಲು ರಾಜ್ಯ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿ ಸಂಬಂಧ ರಾಜ್ಯ ಸರಕಾರವು ಫೆ.17ರಂದು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ 2018ರ ಮೇ 31ರೊಳಗೆ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಕಲ್ಪಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿತ್ತು. ಆದರೆ, ಈವರೆಗೂ ವಾರ್ಡ್ ಮರು ವಿಂಗಡನೆ ಹಾಗೂ ಮೀಸಲು ಪಟ್ಟಿ ಕಲ್ಪಿಸದ ಹಿನ್ನೆಲೆಯಲ್ಲಿ ಆಯೋಗವು ಹೈಕೋರ್ಟ್‌ಗೆ ಈ ಮನವಿ ಮಾಡಿದೆ.
ಸೋಮವಾರ ಚುನಾವಣಾ ಆಯೋಗದ ಪರ ವಕೀಲರು, ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಹಾಜರಾಗಿ, ಈ ಸೆಪ್ಟೆಂಬರ್ ಹಾಗೂ 2019ರ ಫೆಬ್ರವರಿ ಅಂತ್ಯದೊಳಗೆ ನಗರಸಭೆ, ಪಟ್ಟಣ ಪಂಚಾಯತ್, ಕಾರ್ಪೊರೇಷನ್ ಒಳಗೊಂಡಂತೆ 116 ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾಗಲಿದೆ. ಅವಧಿ ಪೂರ್ಣವಾಗುವುದರೊಳಗೆ ಚುನಾವಣೆ ನಡೆಸಬೇಕಿರುವುದು ಆಯೋಗದ ಕರ್ತವ್ಯ ಎಂದು ತಿಳಿಸಿದರು.
ಅಲ್ಲದೆ, ಚುನಾವಣೆಗೆ ಮೀಸಲು ಮತ್ತು ಕ್ಷೇತ್ರ ಮರು ವಿಂಗಡಣೆಯ ಪರಿಷ್ಕೃತ ಪಟ್ಟಿಯನ್ನು ಆಯೋಗವು ಒಂದು ವರ್ಷಕ್ಕೂ ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಪಟ್ಟಿ ಒದಗಿಸಲು ಹಲವು ಬಾರಿ ಆಯೋಗವು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಕೋರಲಾಗಿದೆ. ರಾಜ್ಯ ಸರಕಾರವು ಫೆ.17ರಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಮೇ 31ರೊಳಗೆ ಪಟ್ಟಿ ಒದಗಿಸಲಾಗುವುದು ಎಂದು ತಿಳಿಸಿದೆ. ಹೀಗಿದ್ದರೂ ಆ ನಿಟ್ಟಿನಲ್ಲಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಮನವಿ ಕುರಿತಂತೆ ಮಧ್ಯಂತರ ಅರ್ಜಿ ಸಲ್ಲಿಸಿ ಎಂಬುದಾಗಿ ಚುನಾವಣಾ ಆಯೋಗದ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.