×
Ad

ಆರ್‌.ಆರ್ ನಗರ ಕ್ಷೇತ್ರ: ಶಾಂತಿಯುತ ಮತದಾನ

Update: 2018-05-28 21:24 IST

ಬೆಂಗಳೂರು, ಮೇ 28: ಜಾಲಹಳ್ಳಿಯಲ್ಲಿ ಸಾವಿರಾರು ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಗೊಂದಲ, ಪ್ರತಿಭಟನೆ, ಬಿಗುವಿನ ವಾತಾವರಣ ಹಾಗೂ ಪೊಲೀಸರ ಕಟ್ಟೆಚ್ಚರದ ನಡುವೆ ಶಾಂತಿಯುತವಾಗಿ ಜರುಗಿತು.

ಸೋಮವಾರ ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಎರಡು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಕಂಡುಬಂದಿದ್ದು ಬಿಟ್ಟರೇ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 14 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 31ರಂದು ಫಲಿತಾಂಶ ಹೊರಬೀಳಲಿದೆ.

ಬೆಳಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಮತದಾನ ಮಾಡಿದರು. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಾಲಹಳ್ಳಿ, ಜೆ.ಪಿ.ಪಾರ್ಕ್, ಯಶವಂತಪುರ, ಎಚ್‌ಎಂಟಿ, ಲಕ್ಷ್ಮೀದೇವಿ ನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿ ನಗರ ವಾರ್ಡ್‌ಗಳನ್ನು ಒಳಗೊಂಡ ಒಟ್ಟು 421 ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಕಟ್ಟೆಚ್ಚರ ವಹಿಸಲಾಗಿತ್ತು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆ ನಂತರದ ಮೊದಲ ಉಪಚುನಾವಣೆ ಇದಾಗಿರುವುದರಿಂದ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಈಗಾಗಲೇ ಮೂರು ಪಕ್ಷಗಳು ಪ್ರತಿಷ್ಠೆಯನ್ನು ಪಣವಾಗಿಟ್ಟು, ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರದ ಮೂಲಕ ಮತಯಾಚಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಮುನಿರತ್ನ, ಜೆಡಿಎಸ್‌ನಿಂದ ರಾಮಚಂದ್ರ ಸೇರಿದಂತೆ ಒಟ್ಟು 14 ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಆರ್.ಆರ್.ನಗರದಲ್ಲಿ ಗುರುತಿನ ಚೀಟಿ ಪ್ರಕರಣ ಹಿನ್ನೆಲೆಯಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಈ ಹಿಂದೆ ಕ್ಷೇತ್ರದ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಸಿಬ್ಬಂದಿಯ ಬದಲಾಗಿ, ಬೇರೆ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ 2524 ಸಿಬ್ಬಂದಿಯನ್ನು ಆಯೋಗ ನಿಯೋಜಿಸಿತ್ತು.

ಕೈಕೊಟ್ಟ ಇವಿಎಂ: ಚಾಮುಂಡೇಶ್ವರಿ ನಗರದ ಮತಗಟ್ಟೆಯಲ್ಲಿ ಬ್ಯಾಲೆಟ್ ಯುನಿಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ 1ಗಂಟೆಗೂ ಹೆಚ್ಚು ಕಾಲ ವೃದ್ಧರು ಹಾಗೂ ಮಹಿಳೆಯರು ಸಾಲಿನಲ್ಲಿ ನಿಲ್ಲುವಂತಾಯಿತು. ಮತಯಂತ್ರ ಸರಿಪಡಿಸಿದ ನಂತರವೂ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಅಧಿಕಾರಿಗಳು ಹೆಣಗಾಟ ನಡೆಸಿದರು.

ಪ್ರತಿಭಟನೆ: ಸಿನೆಮಾ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಲಗ್ಗೆರೆಯಲ್ಲಿ ಮತಗಟ್ಟೆ ಸಮೀಪ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಈ ನಡೆಯನ್ನು ಖಂಡಿಸಿ ಕಾರ್ಯಕರ್ತರು ಮತಗಟ್ಟೆ ಹತ್ತಿರದಲ್ಲೇ ಪ್ರತಿಭಟನೆ ನಡೆಸಿದರು.
ಲಗ್ಗೆರೆಯ ಮುನೇಶ್ವರ ಬಡಾವಣೆಯ ಸರಕಾರಿ ಶಾಲೆಯ ಮತಕೇಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಂತಿಯುತ ವಾತಾವರಣವಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಇದ್ದಿದ್ದರಿಂದ ಯಾವುದೇ ಸಮಸ್ಯೆಯಾಗಿರಲಿಲ್ಲ.

ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನರಿಗೆ ಆಪ್ತರಾದ ರಾಕ್‌ಲೈನ್ ವೆಂಕಟೇಶ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದರು. ಮತಕೇಂದ್ರದಿಂದ 100 ಮೀಟರ್ ದೂರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟೇಬಲ್ ಹಾಕಿಕೊಂಡು ಚೀಟಿ ನೀಡುತ್ತಿದ್ದರು. ಅಲ್ಲಿಗೆ ತೆರಳಿದ ಅವರು ಕಾರ್ಯಕರ್ತರೊಡನೆ ನಿಂತುಕೊಂಡು ಮತಕೇಂದ್ರಕ್ಕೆ ತೆರಳುವವರ ಬಳಿ ಮಾತ ಯಾಚಿಸಿದರು ಎನ್ನಲಾಗಿದೆ.

ರಾಜರಾಜೇಶ್ವರಿ ನಗರದ ಶಾಸಕರಾಗಿರುವ ಮುನಿರತ್ನ ಐದು ವರ್ಷ ಅಭಿವೃದ್ಧಿ ಮಾಡಿದ್ದಾರೆ. ಜನರ ಸೇವೆ ಮಾಡಿದ್ದಾರೆ. ಅವರನ್ನೇ ಮತ್ತೊಮ್ಮೆ ಗೆಲ್ಲಿಸಿ ಎಂದು ಮತದಾರರಿಗೆ ಕೋರಿದರು. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ವಾರ್ಡ್‌ಗೆ ಸಂಬಂಧಪಟ್ಟಿಲ್ಲದವರು ಬಂದು ಈ ರೀತಿ ಮತ ಬೇಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಇದು ಪಕ್ಷಗಳ ಕಾರ್ಯಕರ್ತರ ನಡುವೆ ಜಗಳಕ್ಕೆ ಕಾರಣವಾಯಿತು ಎಂದು ತಿಳಿದು ಬಂದಿದೆ.

ಮತ ಚಲಾಯಿಸಿದ ಪ್ರಮುಖರು: ಐಡಿಯಲ್ ಹೋಮ್ಸ್ ಬಡಾವಣೆಯ ಮೌಂಟ್ ಕಾರ್ಮೆಲ್ ಸ್ಕೂಲ್‌ನಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಅವರು ಪತ್ನಿಯೊಂದಿಗೆ ಮತದಾನ ಮಾಡಿದರೆ, ಬಿಜೆಪಿ ಮುಖಂಡ ಆರ್.ಅಶೋಕ್ ಜಾಲಹಳ್ಳಿಯಲ್ಲಿ ಕುಟುಂಬ ಮೇತವಾಗಿ ಮತ ಚಲಾಯಿಸಿದರು.

ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಕುಟುಂಬ ಸಮೇತ ಬಂದು ಬಿಇಟಿ ಕಾನ್ವೆಂಟ್ ಸ್ಕೂಲ್‌ನಲ್ಲಿ ಮತ ಚಲಾಯಿಸಿದರು. ಈ ವೇಳೆ ಸೊಸೆ ಹಾಗೂ ನಟಿ ಅಮೂಲ್ಯ ಹಾಗೂ ಪತ್ರ ಜಗದೀಶ್ ಅವರಿಗೆ ಜೊತೆಯಲಿದ್ದರು.

ವಿಶೇಷ ವ್ಯಕ್ತಿಗಳ ಮತದಾನ
ಇದೇ ಮೊದಲ ಬಾರಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಮತದಾನ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಸುಂಕದಕಟ್ಟೆಯ ಶ್ರೀನಿವಾಸ ನಗರದ ಮತಗಟ್ಟೆಯಲ್ಲಿ 300ಕ್ಕೂ ಹೆಚ್ಚು ಭಿಕ್ಷುಕರು ತಮ್ಮ ಹಕ್ಕು ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News