ಎಸಿಬಿ ಕುರಿತು ರಾಜ್ಯ ಸರಕಾರದ ನಿಲುವೇನು: ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಮೇ 28: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕುರಿತು ರಾಜ್ಯದ ನೂತನ ಸರಕಾರದ ನಿಲುವು ತಿಳಿಯಲು ಹೈಕೋರ್ಟ್ ಬಯಸಿದೆ.
ಎಸಿಬಿ ರಚನೆಗೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳು ಸೋಮವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ. ಶ್ಯಾಮಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಎಸಿಬಿಯನ್ನು ರಚನೆ ಮಾಡಿರುವುದು ಹಿಂದಿನ ಸರಕಾರ. ಇದೀಗ ನೂತನ ಸರಕಾರ ರಚನೆಯಾಗಿದೆ. ಹೀಗಾಗಿ ಈ ವಿಚಾರದಲ್ಲಿ ಬದಲಾವಣೆ ಏನಾದರೂ ಇದೆಯೇ? ನೂತನ ಸರಕಾರದ ನಿಲುವನ್ನು ನ್ಯಾಯಾಲಯ ತಿಳಿಯ ಬಯಸುತ್ತಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರಿಗೆ ತಿಳಿಸಿದರು.
ಪೊನ್ನಣ್ಣ ಉತ್ತರಿಸಿ, ಸರಕಾರದಿಂದ ವಿವರಣೆ ಪಡೆದು ನ್ಯಾಯಾಲಯಕ್ಕೆ ತಿಳಿಸುವುದಾಗಿ ಹೇಳಿದರು. ಇದರಿಂದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠವು ಜೂನ್ 1ಕ್ಕೆ ಮುಂದೂಡಿತು.