×
Ad

ಹೈಕೋರ್ಟ್ ನೌಕರರ ಪರಿಷ್ಕೃತ ವೇತನವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಹೈಕೋರ್ಟ್ ನಿರ್ದೇಶನ

Update: 2018-05-28 21:39 IST

ಬೆಂಗಳೂರು, ಮೇ 28: ಕೇಂದ್ರ ಸರಕಾರಿ ನೌಕರರ ವೇತನ ಶ್ರೇಣಿಗೆ ಸಮಾನವಾಗಿ ಹೈಕೋರ್ಟ್ ನೌಕರರ ವೇತನ ಪರಿಷ್ಕರಿಸಿ 2004ರ ಸೆಪ್ಟೆಂಬರ್‌ನಿಂದ 2018ರ ಮಾರ್ಚ್ 31ರವರೆಗಿನ ಹಿಂಬಾಕಿಯನ್ನು ಬಡ್ಡಿಸಮೇತ ಪಾವತಿಸಬೇಕು ಮತ್ತು ಇದೇ ಎಪ್ರಿಲ್ ಮತ್ತು ಮೇ ಸಂಬಂಧಪಟ್ಟಂತೆ ಪರಿಷ್ಕೃತ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರದ ಹಣಕಾಸು ಇಲಾಖೆಗೆ ನಿರ್ದೇಶಿಸಿದೆ.

ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲಿಸುವಲ್ಲಿ ರಾಜ್ಯ ಸರಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ನಿವೃತ್ತ ನೌಕರ ನಿಜಗುಣಿ ಎಂ. ಕರಡಿಗುಡ್ಡ ಮತ್ತು ಕರ್ನಾಟಕ ಹೈಕೋರ್ಟ್ ನೌಕರರ ಕಲ್ಯಾಣ ಸಂಘ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.

ವಿಚಾರಣೆಗೆ ಈ ವೇಳೆ ರಾಜ್ಯ ಹಣಕಾಸು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಖುದ್ದು ಹಾಜರಾಗಿ ಪ್ರಮಾಣಪತ್ರ ಸಲ್ಲಿಸಿದರು. ಹೈಕೋರ್ಟ್ ಸಿಬ್ಬಂದಿ ವೇತನವನ್ನು ಈಗಾಗಲೇ ಪರಿಷ್ಕರಿಸಲಾಗಿದೆ. ವೇತನ ವಿತರಣೆಗಾಗಿ ಸಿದ್ಧಪಡಿಸಲಾಗಿರುವ ಸಾಫ್ಟ್‌ವೇರ್‌ನಲ್ಲಿ ಕೆಲ ತಾಂತ್ರಿಕ ತೊಂದರೆ ಎದುರಾಗಿರುವುದರಿಂದ ವೇತನ ಪಾವತಿಯಲ್ಲಿ ವಿಳಂಬವಾಗಿದೆ.

ಹೀಗಾಗಿ ಅದು ಕಾರ್ಯ ನಿರ್ವಹಿಸುವವರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಖಜಾನೆಗೆ ಎಪ್ರಿಲ್ ಮತ್ತು ಮೇ ತಿಂಗಳ ಪರಿಷ್ಕೃತ ವೇತನ ಮತ್ತು ಹಿಂಬಾಕಿ ಕುರಿತು ಮ್ಯಾನುವಲ್ ಬಿಲ್‌ಗಳನ್ನು ಕಳುಹಿಸಿಕೊಟ್ಟರೆ, ಅದರ ಮೇಲೆ ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಸಿದ್ಧವಿದೆ. ಈ ಸಂಬಂಧ ಅಗತ್ಯವಿರುವ ಆದೇಶಗಳನ್ನು ಇಂದೇ ಹೊರಡಿಸಲಾಗುವುದು ಎಂದು ತಿಳಿಸಿದರು.

ಈ ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ರಿಜಿಸ್ಟ್ರಾರ್ ಅವರು ಮ್ಯಾನುಯಲ್ ಬಿಲ್‌ಗಳನ್ನು ಕಳುಹಿಸಿಕೊಟ್ಟ ತಕ್ಷಣವೇ ಹೈಕೋರ್ಟ್ ಸಿಬ್ಬಂದಿಗೆ 2004ರ ಅ.6ರಿಂದ 2018ರ ಮಾ. 31ರ ವರೆಗಿನ ಹಿಂಬಾಕಿಯನ್ನು ಬಡ್ಡಿ ಸಹಿತ ಪಾವತಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮೇ 30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News