ಸುಳ್ಳು ಸಂದೇಶಗಳನ್ನು ಹರಡುವುದರ ಲಾಭವೇನು?

Update: 2018-05-29 18:54 GMT

ಮಾನ್ಯರೇ,

ಯುವ ಜನತೆ ಸಾಮಾಜಿಕ ಜಾಲತಾಣವನ್ನು ಇತ್ತೀಚೆಗೆ ಹೆಚ್ಚಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳಿಂದ ಸೃಷ್ಟಿಸಲ್ಪಟ್ಟು, ಅವರಿಂದ ಇನ್ಯಾರಿಗೂ ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟರ್ ಮೂಲಕ ಹಂಚಲ್ಪಡುವ ಸುಳ್ಳು ಸಂದೇಶಗಳನ್ನು, ಸುದ್ದಿಯ ಸತ್ಯಾಸತ್ಯತೆಗಳನ್ನು ತಿಳಿಯದೆ ಬೇರೆಯವರಿಗೂ ಹಂಚುವ ಮೂಲಕ ಸಮಾಜದಲ್ಲಿ ಗೊಂದಲ ಮತ್ತು ಆತಂಕವನ್ನುಂಟುಮಾಡುತ್ತಿದ್ದಾರೆ. ಇತ್ತೀಚಿನ ಕೋಟಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕರ ಬಗ್ಗೆಯೂ ಸುಳ್ಳು ಸಂದೇಶಗಳನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹರಿಯಬಿಡಲಾಗಿತ್ತು. ಇದು ಸಾಲುಮರದ ತಿಮ್ಮಕನ ಲಕ್ಷಾಂತರ ಅಭಿಮಾನಿಗಳಲ್ಲಿ ಮತ್ತು ಕರ್ನಾಟಕದ ಜನರಿಗೆ ಆತಂಕ ಮತ್ತು ನೋವುಂಟು ಮಾಡಿತ್ತು. ಅಲ್ಲದೆ ಸ್ವತಃ ತಿಮ್ಮಕ್ಕನವರೇ ಮಾಧ್ಯಮದ ಮುಂದೆ ಬಂದು ಮಾತನಾಡಿ ‘‘ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಿರಿ, ನಾನು ಚೆನ್ನಾಗಿಯೇ ಇರುವೆ’’ ಎಂದು ತಿಳಿಸಬೇಕಾಯಿತು.

ಇತ್ತೀಚೆಗೆ ಹಿರಿಯ ಚಿತ್ರ ನಟಿ ಅಭಿನಯ ಶಾರದೆ ಜಯಂತಿಯವರ ವಿಷಯದಲ್ಲೂ ಹೀಗೆಯೇ ಆಯಿತು. ಅಷ್ಟೇ ಅಲ್ಲದೆ ಈಗ ಮಕ್ಕಳ ಕಳ್ಳರ ಬಗ್ಗೆ ಸುಳ್ಳು ವದಂತಿ ಹಬ್ಬಿಸಿ ಎಲ್ಲಾ ಮೊಬೈಲ್ ಫೋನ್‌ಗಳಿಗೆ ಹರಿಯಬಿಟ್ಟು ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಯುವಜನತೆ ಯಾಕಾಗಿ ಇಂತಹ ಅನಾರೋಗ್ಯಕರ ಸಂದೇಶಗಳನ್ನು ಹರಡುತ್ತಿದ್ದಾರೆ? ಇಂತಹ ಸಂದೇಶಗಳಿಂದ ಸಿಗುವ ವಿಕೃತ ಸಂತೋಷಕ್ಕಾಗಿ ಸಮಾಜದ ಆರೋಗ್ಯ ಕೆಡಿಸುವುದು ಸರಿಯೇ? ಆದ್ದರಿಂದ ಇನ್ನಾದರೂ ಯುವ ಜನತೆ ಸಾಮಾಜಿಕ ಜಾಲತಾಣವನ್ನು ಉತ್ತಮ ವಿಷಯಗಳ ಆರೋಗ್ಯಕರ ಚರ್ಚೆಗೆ ಬಳಸಿಕೊಳ್ಳಲಿ.

ಸಮಾಜದ ಸಾಮಾಜಿಕ ಸಮಾನತೆ, ಅತ್ಯಾಚಾರ, ಭ್ರಷ್ಟಾಚಾರ, ಅನ್ಯಾಯ, ಅಧರ್ಮ, ಮಹಿಳಾ ಶೋಷಣೆ, ಹಿಂದುಳಿದ ಸಮುದಾಯಗಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಕಾನೂನು ಸುವ್ಯವಸ್ಥೆಯ ಬಗ್ಗೆ ಸರಕಾರಗಳ ಗಮನ ಸೆಳೆಯಲು ಪ್ರಯತ್ನಿಸಿ. ಹಾಗಾದಾಗ ಮಾತ್ರ ಸಾಮಾಜಿಕ ಜಾಲತಾಣಗಳ ಉಪಯೋಗಕ್ಕೆ ಸಾರ್ಥಕತೆ ಸಿಗುತ್ತದೆ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News