ಮೈತ್ರಿ ಸರಕಾರದಲ್ಲಿ ಝಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ?
ಬೆಂಗಳೂರು, ಮೇ.30: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರದ ಸಚಿವ ಸಂಪುಟ ರಚನೆ ಕಸರತ್ತು ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಶುಕ್ರವಾರ ಅಥವಾ ಸೋಮವಾರ ನೂತನ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರ ಕೋಟಾದಲ್ಲಿ ಝಮೀರ್ ಅಹ್ಮದ್ ಖಾನ್ ಸಚಿವರಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್ ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ಸೇರಿ ಈ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆಯಿಂದ ಗೆದ್ದಿದ್ದಾರೆ. ಅವರು ಜೆಡಿಎಸ್ ನಿಂದ 7 ಶಾಸಕರನ್ನು ಕಾಂಗ್ರೆಸ್ ಗೆ ಕರೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಗೆ 2 ರಾಜ್ಯಸಭಾ ಚುನಾವಣೆಗಳಲ್ಲಿ ಬೆಂಬಲ ನೀಡಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಲು ಸಹಕರಿಸಿದವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಪ್ತರು ಎಂದೇ ಗುರುತಿಸಲ್ಪಟ್ಟವರು. ಕಾಂಗ್ರೆಸ್ ಸರಕಾರ ಬಂದರೆ ಸಚಿವ ಸ್ಥಾನ ನೀಡುವುದಾಗಿ ಸಿದ್ದರಾಮಯ್ಯರವರು ಝಮೀರ್ ಅಹ್ಮದ್ ಖಾನ್ ಗೆ ಭರವಸೆ ನೀಡಿದ್ದರೆನ್ನಲಾಗಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಹ ಝಮೀರ್ ಅಹ್ಮದ್ ಖಾನ್ ಪಕ್ಷಕ್ಕೆ ನೀಡಿರುವ ಸಹಕಾರಕ್ಕಾಗಿ ಅವರಿಗೆ ಮಂತ್ರಿ ಪದವಿ ನೀಡಲು ಒಲವು ತೋರಿಸಿದ್ದರೆನ್ನಲಾಗಿದೆ. ಹಾಗಾಗಿ ಝಮೀರ್ ಅಹ್ಮದ್ ಖಾನ್ ಸಚಿವ ಸಂಪುಟ ಸೇರುವುದು ಬಹುತೇಕ ಖಚಿತ.