ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬಿಎಸ್‌ವೈ ಆಕ್ರೋಶ
ಬೆಂಗಳೂರು, ಮೇ 30: ರೈತರ ಸಾಲವನ್ನು ಬುಧವಾರ ಮನ್ನಾ ಮಾಡದೆ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊಸದಿಲ್ಲಿಯಲ್ಲಿ ಹೇಳಿಕೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ, ಸಾಲ ಮನ್ನಾ ಮಾಡಿರುವ ನಿರ್ಧಾರವನ್ನು ಪ್ರಕಟಿಸಬೇಕು, ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬುಧವಾರ ನಗರದ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಡೆಸಿದ ಹೋರಾಟದ ಪರಿಣಾಮ ಮುಖ್ಯಮಂತ್ರಿ, ರೈತ ಮುಖಂಡರ ಸಭೆಯನ್ನು ಕರೆದಿದ್ದಾರೆ. ಇದೀಗ, ಸಾಲ ಮನ್ನಾ ಮಾಡಲು 15 ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ ಎಂದು ಟೀಕಿಸಿದರು. ಸಣ್ಣ ಮತ್ತು ಅತೀ ಸಣ್ಣ ರೈತರು ಸಹಕಾರ ಸಂಘಗಳಲ್ಲಿ 20 ಅಥವಾ 40 ಸಾವಿರ ರೂ.ಸಾಲ ಪಡೆದಿರುತ್ತಾರೆ. ಈ ಹಿಂದಿನ ಸರಕಾರವು ಸಹಕಾರ ಸಂಘಗಳಲ್ಲಿನ 50 ಸಾವಿರ ರೂ.ವರೆಗಿನ ಸಾಲವನ್ನು ಮನ್ನಾ ಮಾಡಿದೆ. ಆದರೆ, ನೀವು ರೈತರ ವಿಚಾರದಲ್ಲಿ ದೊಂಬರಾಟ ಮಾಡುತ್ತಿದ್ದು, ಅವರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದೀರಾ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರೈತರ 53 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವ ವಿಚಾರ ಏನಾಯಿತು? ಧರ್ಮಸ್ಥಳದವರೆಗೂ ಹೋಗಿ ರೈತರ ಖಾಸಗಿ ಸಾಲವನ್ನು ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರಿಗೆ ಮೋಸ ಮಾಡಿದ್ದಾರೆ. ರೈತರ ಸಾಲ ಮನ್ನಾ ಆಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಮೊದಲ ಹಂತದಲ್ಲಿ ಸಣ್ಣ, ಅತಿಸಣ್ಣ ರೈತರ ಸಾಲ ಮನ್ನಾ ಮಾಡುತ್ತಾರಂತೆ. ಎರಡನೆ ಹಂತದಲ್ಲಿ ಇನ್ನೊಂದು ಮಾಡುತ್ತಾರಂತೆ. ಉಪ ಮುಖ್ಯಮಂತ್ರಿ ಪರಮೇಶ್ವರ್‌ರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಮುಖ್ಯಮಂತ್ರಿ ರೈತರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ದೂರಿದರು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಕೇಳಿ ರೈತರ ಸಾಲ ಮನ್ನಾ ಮಾಡುವುದಾದರೆ, ಕುಮಾರಸ್ವಾಮಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ವಿಚಾರವನ್ನು ಏಕೆ ಪ್ರಕಟಿಸಬೇಕಾಗಿತ್ತು ಎಂದು ಯಡಿಯೂರಪ್ಪ ಪ್ರಶ್ನಿಸಿದರು.