ಒಂದು ವಾರದೊಳಗೆ ವಿದ್ಯುತ್ ದರ ಕಡಿತಗೊಳಿಸಲು ಆಗ್ರಹ: ಜೂ.6 ರಂದು ಬೆಸ್ಕಾಂಗೆ ಮುತ್ತಿಗೆ

Update: 2018-05-30 12:54 GMT

ಬೆಂಗಳೂರು, ಮೇ 30: ಬೆಸ್ಕಾಂ ಒಂದು ಯೂನಿಟ್ ವಿದ್ಯುತ್ ದರವನ್ನು ಶೆ. 5ರಿಂದ 6ರಷ್ಟು ಹೆಚ್ಚಳ ಮಾಡಿರುವುದನ್ನು ಒಂದು ವಾರದೊಳಗೆ ಹಿಂಪಡೆಯಬೇಕು, ಇಲ್ಲದಿದ್ದರೆ, ಜೂ.6 ರಂದು ಬೆಸ್ಕಾಂಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ನವಭಾರತ್ ಪಕ್ಷ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಗಗನ್, ಬೆಸ್ಕಾಂ ಏಕಾಏಕಿ ಒಂದು ಯೂನಿಟ್‌ಗೆ ಶೇ.5-6 ರಷ್ಟು ದರ ಏರಿಕೆ ಮಾಡಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಹೊರೆಯಾಗುತ್ತದೆ. ಯಾವುದೆ ಮುಂದಾಲೋಚನೆಯಿಲ್ಲದೆ ಅನಗತ್ಯವಾಗಿ ದರ ಹೆಚ್ಚಳ ಮಾಡಿದ್ದಾರೆ ಎಂದು ಆರೋಪಿಸಿದರು.

ಒಂದು ಯೂನಿಟ್ ವಿದ್ಯುತ್ ಬೆಲೆಯು 3.16 ರೂ.ಗೆ ತೆರೆದ ವಿನಿಮಯದ ಲಭ್ಯವಿದ್ದರೂ ಸಹ ಬೆಸ್ಕಾಂ ಸಂಸ್ಥೆಯು ಒಂದು ಯೂನಿಟ್ ವಿದ್ಯುತ್ತನ್ನು 4.35 ರೂ.ಗಳಿಗೆ ಖರೀದಿ ಮಾಡುತ್ತಿರುವ ಕಾರಣವೇನು? ಬೆಸ್ಕಾಂಗೆ 1173 ಕೋಟಿ ರೂ.ಗಳಷ್ಟು ಹಣ ಗ್ರಾಹಕರಿಂದ ಪಾವತಿಯಾಗಿಲ್ಲ ಎಂದು ಹೇಳಿಕೊಂಡಿದೆ. ಸಂಸ್ಥೆಗೆ ಮೋಸ ಮಾಡುತ್ತಿರುವವರು ಯಾರು? ವಿವರ ಬಹಿರಂಗಪಡಿಸಬೇಕು ಹಾಗೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರದಿಂದ ಒಂದು ಐಪಿ ಸೆಟ್ಟಿಗೆ 86 ಸಾವಿರ ರೂ.ಗಳಂತೆ 10 ಲಕ್ಷ ರೈತರಿಗೆ ಸಬ್ಸಿಡಿ ನೀಡಲಾಗುತ್ತಿದೆ. ಇದು ಸರಕಾರದ ಯಾವ ನಿಧಿಯಿಂದ ಬಿಡುಗಡೆಯಾದ ಅನುದಾನ ಎಂಬುದನ್ನು ಬಹಿಂಗಪಡಿಸಬೇಕೆಂದು ಆಗ್ರಹಿಸಿದರು.

ಪಟ್ಟಣದ ಹಲವು ವಲಯಗಳಲ್ಲಿ ವಿದ್ಯುತ್ ಸಂವಹನ ನಷ್ಟವೂ ಶೇ.25-30 ಇರುತ್ತದೆ. ಆದರೆ, ಕೆಆರ್‌ಇಸಿ ಮಾರ್ಗಸೂಚಿ ಅನ್ವಯ ವಿದ್ಯುತ್ ಸ್ಥಿರಮಿತಿಯು ಶೇ.12.75 ರಷ್ಟು ಇರಬೇಕು. ಹಾಗಾದರೆ, ನಮ್ಮ ವಿದ್ಯುತ್ ಅನ್ನು ಕದಿಯುತ್ತಿರುವವರು ಯಾರು. ಈ ಸಂಬಂಧ ಬೆಸ್ಕಾಂ ಜಾಗೃತ ದಳ ಎಷ್ಟು ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಮತ್ತು ಎಷ್ಟು ಕ್ರಮ ಜರುಗಿಸಲಾಗಿದೆ. ಹಾಗೂ ಬೆಸ್ಕಾಂ ಸಂಸ್ಥೆಯಲ್ಲಿಯೇ ಹಣದ ಅಭಾವವಿರುವ ಬೇರೆ ಸಂಸ್ಥೆಗಳಿಗೆ ಸಾವಿರಾರು ಕೋಟಿ ಹಣವನ್ನು ಯಾವುದೇ ಬಡ್ಡಿಯಿಲ್ಲದೆ ಮತ್ತು ಹಣವನ್ನು ಹಿಂದಿರುಗಿಸುವ ನಿರ್ದಿಷ್ಟ ಸಮಯವನ್ನು ನಿಗದಿಪಡಿಸದೆ ನೀಡುತ್ತಿರುವ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News