ದೋಷಯುಕ್ತ ಇವಿಎಂ:ಚುನಾವಣಾ ಆಯೋಗದ ವಿರುದ್ಧ ಗಡ್ಕರಿ ಟೀಕೆ

Update: 2018-05-30 18:45 GMT

ಹೊಸದಿಲ್ಲಿ, ಮೇ 30: ಮಹಾರಾಷ್ಟ್ರದಲ್ಲಿ ಉಪಚುನಾವಣೆಗಳನ್ನು ನ್ಯಾಯಸಮ್ಮತವಾಗಿ ನಡೆಸುವಲ್ಲಿ ವೈಫಲ್ಯಕ್ಕಾಗಿ ಚುನಾವಣಾ ಆಯೋಗವನ್ನು ಟೀಕಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,ಆದರೆ ಆಯೋಗವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಬಿಜೆಪಿ ಅಥವಾ ನರೇಂದ್ರ ಮೋದಿ ಸರಕಾರವನ್ನು ವಿವಾದದಲ್ಲಿ ಎಳೆದು ತರಬಾರದು ಎಂದು ಹೇಳಿದ್ದಾರೆ.

ಪ್ರದೇಶದಲ್ಲಿಯ ತೀವ್ರ ತಾಪಮಾನ ಮತ್ತು ಧೂಳು ಇವಿಎಂಗಳು ಮತ್ತು ವಿವಿಪ್ಯಾಟ್‌ಗಳು ವಿಫಲಗೊಳ್ಳಲು ಕಾರಣ ಎಂಬ ಚುನಾವಣಾ ಆಯೋಗದ ಸಮಜಾಯಿಷಿಯು ತನಗೆ ದಿಗಿಲನ್ನುಂಟು ಮಾಡಿದೆ ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಗಡ್ಕರಿ ಹೇಳಿದರು.

ಮತದಾನದ ಸಂದರ್ಭ ತಾನು ಭಂಡಾರಾದಲ್ಲಿದ್ದೆ. ಹಲವಾರು ಇವಿಎಂಗಳು ಸ್ಥಗಿತಗೊಂಡಿದ್ದವು,ಉಷ್ಣತೆಯಿಂದ ಹಾಗೆ ಆಗಿತ್ತು ಎಂದು ಆಯೋಗವು ಹೇಳುತ್ತಿದೆ. ಉಷ್ಣತೆಗೆ ಅದು ಯಾವ ಅರ್ಥ ನೀಡಿದೆ? ಆ ಪ್ರದೇಶದಲ್ಲಿ ತಾಪಮಾನ ಯಾವಾಗಲೂ ಹೆಚ್ಚಿರುತ್ತದೆ ಎಂದರು.

ಚುನಾವಣಾ ಆಯೋಗವು ಅಧಿಕಾರದಲ್ಲಿರುವವರ ಅಡಿಯಾಳಾಗಿದೆ ಎಂದು ಹೇಳುವ ಮೂಲಕ ಶಿವಸೇನೆಯು ಅದನ್ನು ಕಟುವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ ಗಡ್ಕರಿಯವರ ಈ ಪ್ರತಿಕ್ರಿಯೆ ಹೊರಬಿದ್ದಿದೆ. ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಮತ್ತು ಪಾಲ್ಘರ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿಯ ಲಾಭಕ್ಕಾಗಿ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಶಿವಸೇನೆಯು ಸುಳಿವು ನೀಡಿತ್ತು.

ಇವಿಎಂ ದೋಷಗಳಿಂದಾಗಿ ಚುನಾವಣಾ ಆಯೋಗವು ಎಲ್ಲ ಕಡೆಗಳಿಂದ ಟೀಕೆಗೆ ಗುರಿಯಾಗಿದೆ. ಭಂಡಾರಾ ಗೊಂಡಿಯಾದಲ್ಲಿ 49 ಮತ್ತು ಉತ್ತರ ಪ್ರದೇಶದ ಕೈರಾನಾದಲ್ಲಿ 73 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಅದು ಆದೇಶಿಸಿದೆ. ಆದರೆ ದೋಷವು ಇವಿಎಂಗಳಲ್ಲಿ ಇಲ್ಲ,ಅದಿರುವುದು ಹೊಸದಾಗಿ ಜಾರಿಗೊಳಿಸಿರುವ ವಿವಿಪ್ಯಾಟ್ ಯಂತ್ರಗಳಲ್ಲಿ ಎಂದು ಅದು ಸ್ಪಷ್ಟನೆ ನೀಡಿದೆ.

ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೋರ್ವರು ದೋಷಪೂರ್ಣ ಇವಿಎಂಗಾಗಿ ಆಯೋಗವನ್ನು ಟೀಕಿಸಿದ್ದು,ಇದು ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕೆಂಬ ಬೇಡಿಕೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News