"ಡಿ.ಕೆ.ಶಿ ವಿರುದ್ಧದ ಉದ್ದೇಶಪೂರ್ವಕ ದಾಳಿ ಮುಂದುವರೆಸಿದರೆ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ"

Update: 2018-06-01 12:44 GMT

ಬೆಂಗಳೂರು, ಜೂ.1: ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರದ ನರೇಂದ್ರ ಮೋದಿ ಸರಕಾರ ಉದ್ದೇಶಪೂರ್ವಕವಾಗಿ ದಾಳಿ ಮುಂದುವರೆಸಿದರೆ, ಕರ್ನಾಟಕದಲ್ಲಿ ಬಿಜೆಪಿ ತನ್ನ ರಾಜಕೀಯ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.

ಶುಕ್ರವಾರ ನಗರದ ಕೆ.ಆರ್ ರಸ್ತೆಯ ಒಕ್ಕಲಿಗರ ಸಂಘದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಕೂಡಲೇ ದ್ವೇಷದ ರಾಜಕಾರಣ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ, ರಾಜ್ಯಾದ್ಯಂತ ಬೃಹತ್ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಬಹುದೊಡ್ಡ ಸಂಚು ರೂಪಿಸಲಾಗಿದೆ ಎಂದು ದೂರಿದರು.

ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿರುವ ದಾಳಿ ಖಂಡಿಸಿ ಒಕ್ಕಲಿಗರ ಸಂಘ ಸೇರಿದಂತೆ ಇನ್ನಿತರ ಸಮುದಾಯಗಳು ಹೋರಾಟ ನಡೆಸಲಿವೆ. ಅಲ್ಲದೆ, ಒಬ್ಬ ನಿಷ್ಠಾವಂತ ನಾಯಕನನ್ನು ಮುಗಿಸಲು ಈ ರೀತಿ ಅಡ್ಡದಾರಿಗಳನ್ನು ಹಿಡಿಯುವುದು ಖಂಡನೀಯ ಎಂದು ತಿಳಿಸಿದರು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರನ್ನು ನಾವು ಬೆಂಬಲಿಸಿದ್ದೇವೆ, ಮುಂದೆಯೂ ಸಹ ಬೆಂಬಲಿಸುತ್ತೇವೆ. ಅವರು ದಾಳಿ ಬಗ್ಗೆ ಕೇಂದ್ರದ ನಾಯಕರನ್ನು ಪ್ರಶ್ನೆ ಮಾಡಬೇಕು ಎಂದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ಡಿಸಿಎಂ ಹುದ್ದೆ ಮತ್ತು ಸಚಿವ ಸ್ಥಾನ ತಪ್ಪಿಸಲು ಅವರ ರಾಜಕೀಯ ಏಳಿಗೆಯನ್ನು ಸಹಿಸದೆ ಈ ರೀತಿ ಮಾಡಲಾಗುತ್ತಿದೆ ಎಂದು ಬೆಟ್ಟೇಗೌಡ ಆರೋಪಿಸಿದರು.

ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಮಂಜೇಗೌಡ ಮಾತನಾಡಿ, ರಾಜಕೀಯ ದ್ವೇಷ ಸಾಧನೆಗೆ ನರೇಂದ್ರ ಮೋದಿ ಸರಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು ಖಂಡನೀಯ. ಇಂತಹ ಬೆದರಿಕೆಗೆ ನಮ್ಮ ಜನಾಂಗದ ನಾಯಕರು ಕುಗ್ಗುವುದಿಲ್ಲ ಎಂದು ಹೇಳಿದರು.

ಸಂಘದ ನಿರ್ದೇಶಕ ಪ್ರೊ.ಮಲ್ಲಯ್ಯ ಮಾತನಾಡಿ, ಸದಾನಂದಗೌಡರು ಕೇಂದ್ರ ಸಚಿವರಾಗಿದ್ದಾರೆ. ಅವರನ್ನು ಈ ವಿಷಯದಲ್ಲಿ ಎಳೆದು ತರುವುದಿಲ್ಲ. ಆದರೆ, ಬಿಜೆಪಿ ರಾಜಕೀಯವಾಗಿ ಈ ರೀತಿ ಮಾಡುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ಕಾಳೇಗೌಡ, ನಿರ್ದೇಶಕರಾದ ಎಂ.ರಮೇಶ್, ಕೃಷ್ಣಮೂರ್ತಿ, ನಂಜೇಗೌಡ, ಎಂ.ಎ.ಆನಂದ್ ಉಪಸ್ಥಿತರಿದ್ದರು.

ಒಕ್ಕಲಿಗರ ಎಚ್ಚರಿಕೆ..!
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಮ್ಮ ಜನಾಂಗದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದರೆ, ಕರ್ನಾಟಕದಲ್ಲಿ ಬಿಜೆಪಿಯ ಶಾಸಕರ ಸಂಖ್ಯಾಬಲ 104ರಿಂದ ಒಂದಂಕಿಗೆ ಇಳಿಯಲಿದೆ.
-ಬೆಟ್ಟೇಗೌಡ, ಅಧ್ಯಕ್ಷ ಒಕ್ಕಲಿಗರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News