‘ಮೈತ್ರಿ ಸರಕಾರ’ದ ಹೊಂದಾಣಿಕೆಗೆ ಸಮನ್ವಯ ಸಮಿತಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-06-01 13:13 GMT

ಬೆಂಗಳೂರು, ಜೂ. 1: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಕ ಮಾಡಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಅಶೋಕ್ ಹೊಟೇಲ್‌ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಅವರು, ಉಭಯ ಪಕ್ಷಗಳು ಸರಕಾರದಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಲಿ. ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಲು ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದರು.

ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ, ಅಗತ್ಯ ಬಿದ್ದಾಗ ಸಮಿತಿ ಸಭೆ ಸೇರಿ ಸರಕಾರ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಚರ್ಚೆ ಮಾಡಲಾಗುವುದು. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಚುನಾವಣಾ ಪ್ರಣಾಳಿಕೆ ಕುರಿತಾಗಿಯೂ ಚರ್ಚೆ ಮಾಡಿ ಜನರ ಹಿತದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ ಎಂಬುದು ಸರಿಯಲ್ಲ. ಉಭಯ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಳ್ಳಲಾಗಿದೆ. ಮಂತ್ರಿ ಸ್ಥಾನ ಸಿಗದವರು ಬಂಡಾಯದ ಬಾವುಟ ಹಾರಿಸಲಿದ್ದಾರೆಂಬುದು ಕೇವಲ ಊಹಾಪೋಹ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News