ಕೇಂದ್ರ ಸರಕಾರದಿಂದ ಹಗಲು ದರೋಡೆ: ಎಸ್‌ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯೆ ಕೆ.ಉಮಾ ಆರೋಪ

Update: 2018-06-01 13:20 GMT

ಬೆಂಗಳೂರು, ಜೂ.1: ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಗಗನಕ್ಕೇರಿಸಿ ಕೇಂದ್ರದ ಬಿಜೆಪಿ ಸರಕಾರ ಜನತೆಯ ಹಣವನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿ ಎಸ್‌ಯುಸಿಐ(ಸಿ) ಕಾರ್ಯಕರ್ತರು ನಗರದ ಮೈಸೂರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಯುಸಿಐ(ಸಿ)ನ ರಾಜ್ಯ ಸಮಿತಿಯ ಸದಸ್ಯೆ ಕೆ.ಉಮಾ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ 2013ರಿಂದ ಕುಸಿತ ಕಂಡಿದ್ದು, ಒಂದು ಸಂದರ್ಭದಲ್ಲಿ ಒಂದು ಬ್ಯಾರಲ್‌ಗೆ 30 ಡಾಲರ್‌ನಷ್ಟು ಕಡಿಮೆ ಮಟ್ಟಕ್ಕೆ ಇಳಿದಿತ್ತು. ಆ ಸಮಯದಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 16.88 ರೂ.ಗೆ ದೊರೆಯಬಹುದಿತ್ತು. ಆದಾಗಿಯೂ ಪೆಟ್ರೋಲ್, ಡೀಸಲ್‌ಗಳ ದರವನ್ನು ಕೇಂದ್ರ ಸರಕಾರ ಇಳಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಮೇಲೆ ಶೇ.205ರಷ್ಟು ಹಾಗು ಡೀಸೆಲ್ ಮೇಲೆ ಶೇ.436ರಷ್ಟು ಕೇಂದ್ರ ಅಬಕಾರಿ ಸುಂಕವನ್ನು ಕೇಂದ್ರ ಸರಕಾರ ಹೆಚ್ಚಿಸಿದೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳು ಇಳಿಮುಖವಾದ ಕಚ್ಚಾತೈಲ ಬೆಲೆಯ ಲಾಭವನ್ನು ತನ್ನ ಜನತೆಗೆ ನೀಡುವಲ್ಲಿ ಯಶಸ್ವಿಯಾಗಿವೆ. ಅಲ್ಲಿನ ಗ್ರಾಹಕರು 40-45 ರೂ.ಗೆ ಪೆಟ್ರೋಲ್ ಹಾಗು ಡೀಸೆಲ್‌ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಕೇಂದ್ರದ ಬಿಜೆಪಿ ಸರಕಾರ ಜನತೆಯ ಮೇಲೆ ಅಗಾಧವಾದ ತೆರಿಗೆಯನ್ನು ವಿಧಿಸುತ್ತಾ ಸಾಗಿದೆ ಎಂದು ಅವರು ಕಿಡಿಕಾರಿದರು.

2014ರಿಂದ ಕೇಂದ್ರ ಅಬಕಾರಿ ಸುಂಕ ಏರುತ್ತಲೇ ಇದೆ. ಕಚ್ಛಾತೈಲದ ಶುದ್ಧೀಕರಣ ಹಂತದಲ್ಲಿ ತಗಲುವ ವೆಚ್ಚ ಕೇವಲ 38 ರೂ.ಗಳು. ಇದಕ್ಕೆ ಹತ್ತಾರು ರೂಪದ ತೆರಿಗೆಗಳನ್ನು ವಿಧಿಸಿ 80ರೂ.ಗಳಿಗೆ ಏರಿಸಲಾಗಿದೆ. ಈ ಹೆಚ್ಚುವರಿ ತೆರಿಗೆಯಿಂದ ಕಳೆದ 4 ವರ್ಷಗಳಲ್ಲಿ 16 ಲಕ್ಷ ಕೋಟಿ ರೂ.ನಷ್ಟು ಹಣ ಕೇಂದ್ರ ಸರಕಾರದ ಖಜಾನೆ ಸೇರಿದೆ. ಈ ದರೋಡೆಯ ಹಣದಿಂದ ಬಂಡವಾಳಶಾಹಿಗಳ ಸಾಲವನ್ನು ಮನ್ನಾ ಮಾಡುವುದಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರಕಾರದ ಈ ಹಗಲು ದರೋಡೆ ಇಲ್ಲಿಗೆ ನಿಲ್ಲುವುದಿಲ್ಲ. ಡೀಸೆಲ್‌ನ ಬೆಲೆ ಏರುತ್ತಿದ್ದಂತೆಯೇ ಕ್ರಮೇಣವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ, ಸಾರಿಗೆ ಬೆಲೆಯೂ ಏರುತ್ತದೆ. ಇದು ಜನ ಸಾಮಾನ್ಯರ ಮೇಲೆ ಎರಡು ಪಟ್ಟು ಹೊರೆಯಾಗುತ್ತಿದೆ. ಕೇಂದ್ರ ಸರಕಾರದ ಈ ನೀತಿ ಅತ್ಯಂತ ಜನವಿರೋಧಿಯಾಗಿದೆ. ಈ ಕೂಡಲೇ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆಯನ್ನು ಇಳಿಸಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಕೆ.ಉಮಾ ಕರೆ ನೀಡಿದರು.

ಈ ವೇಳೆ ಎಸ್‌ಯುಸಿಐ(ಸಿ)ನ ಜಿಲ್ಲಾ ಸಮಿತಿ ಸದಸ್ಯ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಎನ್.ರವಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News