ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ: ಕೆ.ಸಿ.ವೇಣುಗೋಪಾಲ್
ಬೆಂಗಳೂರು, ಜೂ.1: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಎಚ್.ಡಿ.ಕುಮಾರಸ್ವಾಮಿ, ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಘೋಷಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರನ್ನೊಳಗೊಂಡ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲು ಉಭಯ ಪಕ್ಷಗಳ ನಾಯಕರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದರು.
ಕುಮಾರಸ್ವಾಮಿ ನೇತೃತ್ವದಲ್ಲಿ ಪಾರದರ್ಶಕ, ಉತ್ತರದಾಯಿತ್ವ, ಪರಿಣಾಮಕಾರಿ ಆಡಳಿತದ ಮೂಲಕ ರೈತರು, ಯುವಕರು, ಮಹಿಳೆಯರು, ರಾಜ್ಯದ ಎಲ್ಲ ವಲಯಗಳ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ, ಕೋಮು ಸಾಮರಸ್ಯಕ್ಕೆ ಆದ್ಯತೆ ನೀಡಲಿದ್ದೇವೆ. ಈ ಸಮ್ಮಿಶ್ರ ಸರಕಾರವು ರಾಜ್ಯದ ಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡಲಿದೆ ಎಂದು ವೇಣುಗೋಪಾಲ್ ತಿಳಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರಕಾರ ರಚನೆ ಮಾಡುವ ತೀರ್ಮಾನವನ್ನು ಕೈಗೊಂಡೆವು ಎಂದು ಅವರು ಹೇಳಿದರು.
ಸಮ್ಮಿಶ್ರ ಸರಕಾರವು ಯಾವುದೇ ಗೊಂದಲಗಳಿಲ್ಲದೆ, ಸುಗಮವಾಗಿ ಆಡಳಿತ ನಿರ್ವಹಿಸುವ ಉದ್ದೇಶದಿಂದ ಎರಡು ಪಕ್ಷಗಳು ಕೆಲವು ತೀರ್ಮಾನಗಳನ್ನು ಕೈಗೊಂಡಿವೆ. ಮೊದಲನೆಯದಾಗಿ ಎರಡು ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನಾಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರಚಿಸಿ ರಾಜ್ಯದ ಜನತೆಯ ಮುಂದಿಡಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಜೆಡಿಎಸ್‌ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ ಅವರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲಾಗುವುದು. ಸಿದ್ದರಾಮಯ್ಯ ಈ ಸಮಿತಿಯ ಅಧ್ಯಕ್ಷರಾಗಲಿದ್ದು, ದಾನಿಶ್ ಅಲಿ ಸಂಚಾಲಕರಾಗಲಿದ್ದಾರೆ ಎಂದು ಅವರು ವಿವರಣೆ ನೀಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ತಲಾ ಒಬ್ಬರಂತೆ ವಕ್ತಾರರನ್ನು ನೇಮಿಸಲಾಗುವುದು. ಕಾಲ ಕಾಲಕ್ಕೆ ಇವರು ಜಂಟಿಯಾಗಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಿಗಮ, ಮಂಡಳಿಗಳ ನೇಮಕಾತಿಯು ಸಮನ್ವಯ ಸಮಿತಿಯಲ್ಲಿ ಅಂತಿಮಗೊಳ್ಳಲಿದೆ. ಕಾಂಗ್ರೆಸ್‌ಗೆ 2:3, ಜೆಡಿಎಸ್‌ಗೆ 1:3 ಸ್ಥಾನಗಳು ಲಭ್ಯವಾಗಲಿವೆ ಎಂದು ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್: ಗೃಹ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ ಮತ್ತು ಸಕ್ಕರೆ ಕೈಗಾರಿಕೆ, ಆರೋಗ್ಯ, ಕಂದಾಯ-ಮುಜುರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ವಸತಿ, ವೈದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ, ಅರಣ್ಯ ಮತ್ತು ಪರಿಸರ, ಕಾರ್ಮಿಕ, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಕಾನೂನು ಮತ್ತು ಸಂಸದೀಯ ವ್ಯವಹಾರ, ವಿಜ್ಞಾನ, ತಂತ್ರಜ್ಞಾನ, ಐಟಿಬಿಟಿ, ಯುವಜನ ಸೇವಾ, ಕ್ರೀಡಾ ಮತ್ತು ಕನ್ನಡ ಸಂಸ್ಕೃತಿ, ಬಂದರು, ಒಳನಾಡು ಸಾರಿಗೆ ಅಭಿವೃದ್ಧಿ ಖಾತೆಗಳು ಹಂಚಿಕೆಯಾಗಿವೆ ಎಂದು ಅವರು ಹೇಳಿದರು.
ಜೆಡಿಎಸ್: ಹಣಕಾಸು ಮತ್ತು ಅಬಕಾರಿ, ಮಾಹಿತಿ, ಗುಪ್ತಚರ, ಯೋಜನೆ ಮತ್ತು ಸಾಂಖ್ಯಿಕ, ಲೋಕೋಪಯೋಗಿ, ಇಂಧನ, ಸಹಕಾರ, ಪ್ರವಾಸೋದ್ಯಮ, ಶಿಕ್ಷಣ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ತೋಟಗಾರಿಕೆ ಮತ್ತು ರೇಷ್ಮೆ, ಸಣ್ಣ ಕೈಗಾರಿಕೆ, ಸಾರಿಗೆ, ಸಣ್ಣ ನೀರಾವರಿ ಖಾತೆಗಳು ಹಂಚಿಕೆಯಾಗಿವೆ ಎಂದು ವೇಣುಗೋಪಾಲ್ ಹೇಳಿದರು.
ಯಾರಿಗೆ ಯಾವ ಖಾತೆಯನ್ನು ನೀಡಬೇಕು ಎಂಬುದನ್ನು ಆಯಾ ಪಕ್ಷಗಳ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವೇಣುಗೋಾಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವರಾದ ರಹ್ಮಾನ್ ಖಾನ್, ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ, ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ದಾನಿಶ್ ಅಲಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆಯಲ್ಲೂ ಮೈತ್ರಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಸ್ಪರ್ಧಿಸಲಿವೆ. ಸ್ಥಾನಗಳ ಹಂಚಿಕೆ ಕುರಿತು ನಂತರದ ದಿನಗಳಲ್ಲಿ ಚರ್ಚಿಸಿ ಅಂತಿಮಗೊಳಿಸುತ್ತೇವೆ.
-ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿಜೂ.6ರಂದು ಸಂಪುಟ ವಿಸ್ತರಣೆ
ರಾಜ್ಯಪಾಲರು ಪೂರ್ವ ನಿಗದಿಯಂತೆ ರವಿವಾರ ಬೆಳಗ್ಗೆಯಿಂದ ಜೂ.5ರ ಸಂಜೆವರೆಗೆ ಹೊಸದಿಲ್ಲಿಯಲ್ಲಿ ನಡೆಯಲಿರುವ ರಾಜ್ಯಪಾಲರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ.6ರಂದು ಮಧ್ಯಾಹ್ನ 2 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಮಗೆ ಸಮಯ ನೀಡಿದ್ದಾರೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ