ಚಿತ್ರಗಳ ಮೂಲಕ ಮಾನವೀಯ ಮೌಲ್ಯಕ್ಕೆ ಜೀವ ತುಂಬಿದ ಕೇಶವ ವಿಟ್ಲ: ದಿನೇಶ್ ಅಮಿನ್ ಮಟ್ಟು
ಬೆಂಗಳೂರು, ಜೂ.1: ಹೃದಯದಲ್ಲಿ ಮಾನವೀಯತೆಯನ್ನು ತುಂಬಿಕೊಂಡಿದ್ದ ಕೇಶವ ವಿಟ್ಲ ಸಾವಿರಾರು ಮಾನವೀಯ ಮೌಲ್ಯವನ್ನು ಸಾರುವ ಛಾಯಾ ಚಿತ್ರಗಳನ್ನು ತೆಗೆದಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಛಾಯಾಚಿತ್ರಗಾರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕೇಶವ ವಿಟ್ಲ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಲ್ಪ ಮಟ್ಟಿಗೆ ಉಢಾಪೆ, ತುಂಟತನವಿದ್ದರೂ ಅಪಾರವಾದ ಸಾಮಾಜಿಕ ಕಳಕಳಿ ಇತ್ತು ಎಂದು ಹೇಳಿದರು.
ವಿಟ್ಲ ಹೆಚ್ಚಿನ ಪ್ರಮಾಣದಲ್ಲಿ ಬೀದಿ ನಾಯಿಗಳು, ಭಿಕ್ಷುಕರು, ಬಡವರು ಹೀಗೆ ಅನೇಕರನ್ನು ಹುಡುಕಿಕೊಂಡು ಹೋಗಿ ಸರಣಿ ಛಾಯಾ ಚಿತ್ರಗಳನ್ನು ತೆಗೆಯುವ ಮೂಲಕ ಸಮಾಜದಲ್ಲಿ ಅವರ ನೋವು, ಸಂಕಷ್ಟಗಳನ್ನು ಫೋಟೋಗಳಲ್ಲಿ ತೆರೆದಿಡುತ್ತಿದ್ದರು. ಅವರು ತೆಗೆದ ಚಿತ್ರಗಳನ್ನು ಪುಸ್ತಕ ಮಾಡಿದ್ದು, ಅದನ್ನು ಗಮನಿಸಿದರೆ ಅವರಲ್ಲಿದ್ದ ಸಾಮಾಜಿಕ ಕಳಕಳಿ ಹಾಗೂ ಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ನುಡಿದರು.
ಅನೇಕರು ಬಡ ಕುಟುಂಬದಿಂದ ಬಂದಿದ್ದರೂ, ಅವರಲ್ಲಿ ಅಪಾರವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿದಾಗ ಮಾತ್ರ ಬೆಳಕಿಗೆ ಬರುತ್ತದೆ. ಕೇಶವ ವಿಟ್ಲ ಸಣ್ಣ ಸ್ಟುಡಿಯೋದಲ್ಲಿ ಫೋಟೋಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಆದರೆ, ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ್ದರಿಂದ ಇಂದು ನಾಡಿನಾದ್ಯಂತ ಎಲ್ಲರಿಗೂ ಚಿರಪರಿಚತರಾಗಿದ್ದಾರೆ. ಅಲ್ಲದೆ, ಅತ್ಯುತ್ತಮ ಛಾಯಾಚಿತ್ರಗಾರರಾಗಿದ್ದಾರೆ ಎಂದರು.
ಜೀವನಪೂರ್ತಿ ಸಿಟ್ಟಿನಿಂದ ಇರುತ್ತಿದ್ದ ಕೇಶವ ವಿಟ್ಲರವರು ಸ್ವಾಭಿಮಾನವನ್ನೂ ಹೊಂದಿದ್ದರು. ಅಲ್ಲದೆ, ಅದರ ಜೊತೆಗೆ ವ್ಯಕ್ತಪಡಿಸದ ಬೆಚ್ಚಗಿನ ಪ್ರೀತಿಯೂ ಅಡಗಿತ್ತು ಎಂದ ಅವರು, ಜೀವನದಲ್ಲಿ ಎಂದೂ ಬದುಕು ಮತ್ತು ಭವಿಷ್ಯದ ಬಗ್ಗೆ ಅವರಿಗೆ ಸ್ಪಷ್ಟತೆಯಿರಲಿಲ್ಲ. ಅವರು ಸಂಪಾದಿಸಿದ ಚಿತ್ರ ಸಂಪುಟ ಹೊರತುಪಡಿಸಿದರೆ ನಿರ್ದಿಷ್ಟವಾದ ಗುರಿಯನ್ನಿಟ್ಟುಕೊಂಡು ಮಾಡಿದ ಒಂದು ಕೆಲಸವಿಲ್ಲ ಎಂದು ದಿನೇಶ್ ಅಮಿನ್ ಮಟ್ಟು ತಿಳಿಸಿದರು.
ಅನಾರೋಗ್ಯದಿಂದ ಜೀವನ ನಡೆಸುತ್ತಿದ್ದರೂ, ಬಹಳಷ್ಟು ಆಶಾವಾದಿಯಾಗಿದ್ದ ವಿಟ್ಲರಿಗೆ, ಇನ್ನೂ ಹೆಚ್ಚು ದಿನ ಬದುಕಬಲ್ಲೆ ಎಂಬ ಆತ್ಮವಿಶ್ವಾಸವಿತ್ತು. ಇತ್ತೀಚಿಗೆ ನಡೆದ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ವಿವಿಧ ರೀತಿಯ ಫೋಟೋಗಳನ್ನು ತೆಗೆದಿದ್ದರು ಎಂದ ಅವರು, ಪತ್ರಕರ್ತರು ಮತ್ತು ಛಾಯಾಗ್ರಾಹಕರು ಎಂದಿಗೂ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬಾರದು. ನಿಮಗೆ ನಿಮ್ಮದೇ ಆದ ಸಂಸಾರ, ಸ್ನೇಹಿತರು ಹಾಗೂ ಅಭಿಮಾನ ಬಳಗವಿರುತ್ತದೆ. ಅವರಿಗೆ ಅಪಾರವಾದ ನೋವನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು.