ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಜತೆ ಕುಮಾರಸ್ವಾಮಿ ಚರ್ಚೆ

Update: 2018-06-01 14:29 GMT

ಬೆಂಗಳೂರು, ಜೂ. 1: ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಕುರಿತು ಇನ್ಫೋಸಿಸ್‌ನ ಕಂಪೆನಿಯ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ತಮ್ಮ ಸಲಹೆಗಳನ್ನು ಶೀಘ್ರದಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ನೀಡಲಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ, ನಾರಾಯಣಮೂರ್ತಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಬೆಂಗಳೂರಿನ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಮಾರ್ಗದರ್ಶನ ನೀಡುವಂತೆ ನಾರಾಯಣಮೂರ್ತಿಯವರನ್ನು ಸಿಎಂ ಕೋರಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತೃತ್ವದಲ್ಲಿಯೇ ರಚಿಸಲಾಗುವ ಈ ಸಮಿತಿ ಎರಡು ತಿಂಗಳಿಗೆ ಒಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತದೆ. ಈ ಸಮಿತಿಯ ಭಾಗವಾಗಿರಲು ನನಗೆ ಹೆಮ್ಮೆ ಇದೆ ಎಂದ ನಾರಾಯಣ ಮೂರ್ತಿ, ಇನ್ನು ಎರಡು ತಿಂಗಳಲ್ಲಿ ತಮ್ಮ ಸಲಹೆಗಳನ್ನು ನೀಡುವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಶ್ವಾಸನೆ ನೀಡಿದರು.

‘ನೀವು ಅಧಿಕಾರದಲ್ಲಿರುವಾಗಲೂ, ಇಲ್ಲದಿರುವಾಗಲೂ ನಿಮ್ಮ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ನೀವು ರಾಜ್ಯದ ಜನತೆಗೆ, ಕೃಷಿಕರಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಇಸ್ರೇಲ್ ಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ದತಿಯ ಅಧ್ಯಯನ ನಡೆಸಿದ್ದರ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತಹ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರದ ಎನ್‌ಜಿಓಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನಾರಾಯಣಮೂರ್ತಿಯವರು, ಸಿಎಂ ಕುಮಾರಸ್ವಾಮಿಯವರಿಗೆ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News