ಧೂಮಪಾನಿಗಳಿಂದ 2.30 ಕೋಟಿ ರೂ.ಗಳ ದಂಡ ವಸೂಲಿ ಮಾಡಿದ ಕೆಎಸ್ಸಾರ್ಟಿಸಿ
ಬೆಂಗಳೂರು,ಜೂ.1: ಕೆಎಸ್ಸಾರ್ಟಿಸಿ ವತಿಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುತ್ತಿದ್ದವರಿಂದ 2.30 ಕೋಟಿ ರೂ.ಗಳಷ್ಟು ದಂಡ ವಿಧಿಸಲಾಗಿದೆ.
ಸಂಸ್ಥೆಯು ತಂಬಾಕು ನಿಷೇಧ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ನಾಲ್ಕು ವರ್ಷಗಳಲ್ಲಿ ವಿವಿಧ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಮಾಡುತ್ತಿದ್ದ 1,14,997 ಪ್ರಯಾಣಿಕರಿಂದ 2.30 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
ಸಾರ್ವಜನಿಕರು ಹಾಗೂ ನಿಗಮದ ಸಿಬ್ಬಂದಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ದೇಶದಲ್ಲಿ ಈವರೆಗೂ ಯಾವುದೇ ಸಾರಿಗೆ ನಿಗಮಗಳಲ್ಲಿ ಈ ರೀತಿಯ ಕಟ್ಟುನಿಟ್ಟಾದ ಧೂಮಪಾನ ನಿಷೇಧವನ್ನು ಜಾರಿಗೊಳಿಸಿ, ಸಿಗರೇಟು ಹಾಗೂ ತಂಬಾಕಿನ ಮೇಲೆ ನೀರನ್ನು ಸುರಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೆಎಸ್ಸಾರ್ಟಿಸಿ ನಿಗಮವು ತಂಬಾಕು ಸೇವನೆಯನ್ನು ತಡೆಯಲು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳು, ವಿಭಾಗೀಯ ಕಚೇರಿಗಳು, ಘಟಕಗಳು ಹಾಗೂ ತರಬೇತಿ ಕೇಂದ್ರಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ ಎಂದು ಘೋಷಿಸಿದ್ದರು.
ಇಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಯಾದಲ್ಲಿ 200ರೂ. ವರೆಗೆ ದಂಡ ವಿಧಿಸಲಾಗುವುದು ಎಂಬ ಫಲಕಗಳನ್ನು ಪ್ರದರ್ಶಿಸಲಾಗಿದೆ. ಇದರ ಜೊತೆಗೆ ಸಂಸ್ಥೆಯ ಆವರಣದಲ್ಲಿ ಸಿಗರೇಟು ಹಾಗೂ ತಂಬಾಕು ವಸ್ತುಗಳ ಜಾಹೀರಾತನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಕಾನೂನು ಉಲ್ಲಂಘನೆ ಮಾಡಿದರೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.