×
Ad

ಜಾಮೀನು ಕೋರಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಮುಹಮ್ಮದ್ ನಲಪಾಡ್

Update: 2018-06-01 20:25 IST

ಬೆಂಗಳೂರು, ಜೂ.1: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಜಾಮೀನು ಕೋರಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮೇ 30ರ ಬುಧವಾರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿ ಮುಹಮ್ಮದ್ ನಲಪಾಡ್‌ಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ, ಈ ಆದೇಶವನ್ನು ಪ್ರಶ್ನಿಸಿ ಮೊಹಮ್ಮದ್ ನಲಪಾಡ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದು, ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಏನಿದು ಪ್ರಕರಣ: ಕಳೆದ ಫೆಬ್ರವರಿ 17ರಂದು ಯುಬಿ ಸಿಟಿಯ ರೆಸ್ಟೊರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಹುಕೋಟಿ ಉದ್ಯಮಿ ಯುವಕನೊಬ್ಬನ ಮೇಲೆ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಮತ್ತು ಆತನ ಹತ್ತಕ್ಕೂ ಹೆಚ್ಚು ಸ್ನೇಹಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮೂರು ದಿನಗಳ ನಂತರ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದರು.

ಸದ್ಯ ಮುಹಮ್ಮದ್ ನಲಪಾಡ್ ಮತ್ತು ಆತನ ಸಹಚರರು ಹಲ್ಲೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇರಿಸಲಾಗಿದೆ.

ಜಾಮೀನು ಕೋರಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸಹಚರರು ಈ ಮೊದಲು ಹೈಕೋರ್ಟ್ ಹಾಗೂ ಸೆಷನ್ಸ್ ಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಎರಡು ನ್ಯಾಯಾಲಯಗಳೂ ಜಾಮೀನು ನೀಡುವುದನ್ನು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದ್ದವು. ಈಗ ಮತ್ತೆ ಮುಹಮ್ಮದ್ ನಲಪಾಡ್ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News