ಎಸಿಬಿಯಲ್ಲಿ ಯಾವುದೆ ಬದಲಾವಣೆ ಮಾಡುವುದಿಲ್ಲ: ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ ಸರಕಾರ
ಬೆಂಗಳೂರು, ಜೂ.1: ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಸರಕಾರದ ನಿರ್ಧಾರಕ್ಕೆ ಈಗಿನ ಸಮ್ಮಿಶ್ರ ಸರಕಾರವೂ ಬದ್ಧವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಶ್ಯಾಮ್‌ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಮುಕ್ತಾಯಗೊಳಿಸಿತು.
ವಿಚಾರಣೆ ವೇಳೆ ರಾಜ್ಯ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಈ ಪ್ರಕರಣದಲ್ಲಿ ಹಿಂದೆ ಮಾಡಿರುವ ವಾದಕ್ಕೆ ಸರಕಾರ ಬದ್ಧವಾಗಿದೆ ಎಂದರು.
ಅರ್ಜಿದಾರ ಶಿವಕುಮಾರ ಎಚ್.ಫುಲ್ಸೆ ವಿರುದ್ಧದ ಪ್ರಕರಣದಲ್ಲಿ ಎಸಿಬಿ ಯಾವುದೇ ವರದಿ ಸಲ್ಲಿಸದಂತೆ ತಡೆ ನೀಡಬೇಕು ಎಂದು ವಕೀಲ ಎಂ.ಅರುಣ್ ಶ್ಯಾಮ್ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈಗಾಗಲೇ ಯಾವುದೇ ಪ್ರಕ್ರಿಯೆ ಈ ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂಬ ಮಧ್ಯಂತರ ಆದೇಶವಿದೆಯಲ್ಲಾ ಎಂದು ತಿಳಿಸಿತು.
ಅರ್ಜಿದಾರರ ಪರ ವಕೀಲರು, ಯಾವುದೇ ಹೆಚ್ಚಿನ ವಾದ ಮಂಡನೆ ಇಲ್ಲ ಎಂದು ತಿಳಿಸಿದ ಕಾರಣ, ಅಂತಿಮ ತೀರ್ಪು ಕಾಯ್ದಿರಿಸುವುದಾಗಿ ನ್ಯಾಯಪೀಠ ತಿಳಿಸಿತು. ಎಸಿಬಿ ರಚನೆ ಮಾಡಿರುವುದು ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ವಿರುದ್ಧವಾಗಿದೆ. ಹೀಗಾಗಿ, ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ಪುನಃ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು ಎಂದು ಕೋರಿ ಸಮಾಜ ಪರಿವರ್ತನಾ ಸಮುದಾಯ ಮತ್ತು ಬೆಂಗಳೂರು ವಕೀಲರ ಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿವೆ.
ಅಂತೆಯೇ ಎಸಿಬಿ ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿದ ಒಟ್ಟು 11 ಅರ್ಜಿಗಳ ವಿಚಾರಣೆಯನ್ನೂ ಇವುಗಳ ಜೊತೆಗೇ ನಡೆಸಲಾಗಿದೆ. ಲೋಕಪಾಲ ಮಸೂದೆಯ ಅನುಸಾರ ಎಲ್ಲ ರಾಜ್ಯಗಳೂ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಬೇಕು ಹಾಗೂ ರಾಜಕಾರಣಿಗಳು ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಯೇ ನಡೆಸಬೇಕು ಎಂಬುದು ಅರ್ಜಿದಾರರ ವಾದ.