2019 ಲೋಕಸಭಾ ಚುನಾವಣೆ: ಇಂದಿರಾ ಗಾಂಧಿ ಯುಗ ಮರಳುವುದೇ?

Update: 2018-06-01 18:31 GMT

ನಾಲ್ಕು ದಶಕಗಳ ಹಿಂದೆ ಇಂದಿರಾ ಗಾಂಧಿ ಪ್ರದರ್ಶಿಸಿದ್ದ ಬದ್ಧತೆ ಮತ್ತು ಪರಿಶ್ರಮ ರಾಜಕೀಯ ಪುನಶ್ಚೇತನ ಪಡೆಯಲು ಪ್ರಯತ್ನಿಸುವ ಪ್ರತಿಯೊಬ್ಬನಿಗೂ ಪಾಠವಾಗಿದೆ. ಜಾಣತನ, ಕುಶಾಗ್ರಮತಿ ಮತ್ತು ಸಮೂಹವನ್ನು ಮನರಂಜಿಸುವ ಸಾಮರ್ಥ್ಯ ಇವುಗಳು ಅಧಿಕಾರವನ್ನು ಕಳೆದುಕೊಂಡ ಮೂರು ವರ್ಷಗಳ ಒಳಗಾಗಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೇರಲು ಪ್ರಮುಖ ಕಾರಣಗಳಾಗಿವೆ. ಆದರೆ ಅವೆಲ್ಲದಕ್ಕೂ ಮಿಗಿಲಾಗಿ ನಿರಂತರ ಶ್ರಮಪಡುವ ಆಕೆಯ ಸಾಮರ್ಥ್ಯ ಆಕೆಗೆ ಬೆನ್ನೆಲುಬಾಗಿ ನಿಂತಿತ್ತು.


ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ಈ ಸಂದರ್ಭದಲ್ಲಿ 40 ವರ್ಷಗಳ ಹಿಂದೆ ಅಂದರೆ 1978ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯು ನೆನಪಾಗುತ್ತದೆ. ಅಷ್ಟರವರೆಗೆ ಯಾವುದೇ ಇತರ ಮಾಮೂಲಿ ಲೋಕಸಭಾ ಕ್ಷೇತ್ರಗಳಂತೆಯೇ ಪರಿಗಣಿಸಲ್ಪ ಡುತ್ತಿದ್ದ ಚಿಕ್ಕಮಗಳೂರು ಕ್ಷೇತ್ರ ಏಕಾಏಕಿ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಯಿತು. ಅದಕ್ಕೆ ಕಾರಣ ಇಂದಿರಾ ಗಾಂಧಿಯ ನಿರ್ಧಾರ. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಲು ಇಂದಿರಾ ಗಾಂಧಿ ನಿರ್ಧರಿಸಿದ ದಿನದಿಂದಲೇ ಚಿಕ್ಕಮಗಳೂರು ಎಂಬ ಸಣ್ಣ ಊರು ರಾಷ್ಟ್ರ ರಾಜಕಾರಣದ ಭೂಪಟದಲ್ಲಿ ಕೆಂಪು ಶಾಯಿಯಲ್ಲಿ ಗುರುತಿಸುವ ಹಂತಕ್ಕೆ ತಲುಪಿತು. ಇಂದಿರಾ ಗಾಂಧಿ ಇಲ್ಲಿಂದ ಉಪಚುನಾವಣೆಗೆ ಸ್ಪರ್ಧಿಸಲು ಅನುವು ಮಾಡಿಕೊಡಲು ಅಂದಿನ ಕಾಂಗ್ರೆಸ್ ಸಂಸದ ಡಿ.ಬಿ. ಚಂದ್ರೇಗೌಡ ತಮ್ಮ ಸ್ಥಾನವನ್ನು ಬಿಟ್ಟು ಕೊಡಬೇಕೆಂಬುದು ಮೊದಲೇ ನಿರ್ಣಯವಾಗಿತ್ತು. ಅಂದು ನಡೆದ ಈ ರಾಜಕೀಯ ತಂತ್ರಗಾರಿಕೆ ಇಂದಿಗೂ ಭಾರತದ ರಾಜಕೀಯ ಕ್ಷೇತ್ರದಲ್ಲಿ ಒಂದು ಪ್ರಮಾಣವಾಗಿ ಉಳಿದಿದೆ. ಅಂದು ಇಂದಿರಾ ಗಾಂಧಿಗೆ ಪ್ರಾಮಾಣಿಕರಾಗಿದ್ದ ಚಂದ್ರೇಗೌಡರು ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಕೈಹಿಡಿದು 2009ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಆದರೆ 2014ರಲ್ಲಿ ಬಿಜೆಪಿ ಚಂದ್ರೇಗೌಡರನ್ನು ಪಕ್ಕಕ್ಕೆ ಸರಿಸಿ ಸದಾನಂದ ಗೌಡರಿಗೆ ಚಿಕ್ಕಮಗಳೂರು ಟಿಕೆಟ್ ನೀಡಿದ್ದು ಬೇರೆ ಮಾತು.

ಚಿಕ್ಕಮಗಳೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಬಳಸಿದ ಘೋಷವಾಕ್ಯ ನಿಜವಾಗಿಯೂ ಅಚ್ಚರಿ ಹುಟ್ಟಿಸುವಂಥದ್ದು. ‘ಏಕ್ ಶೇರ್ನಿ, ಸೌ ಲಂಗೂರ್, ಚಿಕ್ಕಮಗಳೂರು, ಚಿಕ್ಕಮಗಳೂರು’ (‘ಒಬ್ಬಳು ಸಿಂಹಿಣಿ, ನೂರು ಕೋತಿಗಳು, ಚಿಕ್ಕಮಗಳೂರು, ಚಿಕ್ಕಮಗಳೂರು) ಹೀಗೆ ಇತ್ತು ಆ ಘೋಷ ವಾಕ್ಯ. ಆ ಕಾಲದಲ್ಲೇ ವಿಪಕ್ಷದ ನಾಯಕರನ್ನು ಕೋತಿಗಳಿಗೆ ಹೋಲಿಸಿದ್ದ ಈ ಘೋಷವಾಕ್ಯ ಸಮಂಜಸವಾದುದಲ್ಲ ಎಂದೆನಿಸಿದರೂ ಅದರಲ್ಲಿ ಅಡಕವಾಗಿದ್ದ ರಾಜಕೀಯ ಸಂದೇಶದ ಕಾರಣದಿಂದ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಈ ಘೋಷವಾಕ್ಯವನ್ನು ಇಂದಿರಾ ಗಾಂಧಿ ಬಳಸಲು ಇದ್ದ ಹಿಂದಿನ ಉದ್ದೇಶ ಮೈತ್ರಿ ಸರಕಾರದ ಯೋಚನೆಯನ್ನು ಜನರ ಮನಸ್ಸಿನಿಂದ ತೆಗೆದುಹಾಕುವುದಾಗಿತ್ತು. ಭಾರತದಲ್ಲಿ ಆಗಿನ ಕಾಲದಲ್ಲಿ ಮೈತ್ರಿ ಸರಕಾರದ ಕಲ್ಪನೆ ಹೊಸದಾಗಿತ್ತು ಮತ್ತು 1967ರಲ್ಲಿ ನಡೆದ ಚುನಾವಣೆಗಳ ನಂತರ ಹಲವು ರಾಜ್ಯಗಳಲ್ಲಿ ಸಂಯುಕ್ತ ವಿದಾಯಕ ದಳ ಸರಕಾರಗಳು ರಚನೆಯಾದರೂ ಮಿತ್ರಪಕ್ಷಗಳು ಪರಸ್ಪರರ ಕುತ್ತಿಗೆ ಹಿಸುಕಲು ಆರಂಭಿಸಿದ ಕಾರಣ ರಾಜಕೀಯ ಜಟಾಪಟಿ ಸೃಷ್ಟಿಯಾಗಿ ಅವಧಿಗೂ ಮುನ್ನ ಚುನಾವಣೆಗಳು ನಡೆಯುವಂತಾಯಿತು. 1977ರಲ್ಲಿ ಆಡಳಿತ ವಿರೋಧಿ ಅಲೆ ಮತ್ತು ತುರ್ತಪರಿಸ್ಥಿತಿಯ ಪರಿಣಾಮವಾಗಿ ಅಸ್ತಿತ್ವಕ್ಕೆ ಬಂದ ಜನತಾ ಪಕ್ಷವೂ ತನ್ನ ಮಿತ್ರಪಕ್ಷಗಳನ್ನು ಜೊತೆಯಾಗಿ ಕೊಂಡೊಯ್ಯುವಲ್ಲಿ ವಿಫಲವಾಗಿ ಯಾವುದೇ ಗಮನಾರ್ಹ ಸಾಧನೆ ಮಾಡದೆ ನಿರ್ಗಮಿಸಿತ್ತು. ಇದೇ ಕಾರಣದಿಂದ ‘ಏಕ್ ಶೇರ್ನಿ, ಸೌ ಲಂಗೂರ್’ ಘೋಷವಾಕ್ಯ 1980ರ ಲೋಕಸಭಾ ಚುನಾವಣೆಯ ವೇಳೆಗೆ ಸರಕಾರ ನಡೆಸಲು ಬಲ್ಲವರನ್ನೇ ಆರಿಸಿ (ಚುನಿಯೇ ಉನ್ಹೇ ಜೋ ಸರಕಾರ್ ಚಲಾ ಸಕೇ) ಎಂಬುದಾಗಿ ಬದಲಾಗಿತ್ತು. ಇದೀಗ 2018ರಲ್ಲಿ ಮತ್ತೆ ಸಮಯದ ಮುಳ್ಳು ಅದೇ ಸ್ಥಾನದಲ್ಲಿ ಬಂದು ನಿಂತಿದೆ. ಆದರೆ ಅಂದಿನ ಜನತಾ ಪಕ್ಷದ ಸ್ಥಾನದಲ್ಲಿ ಇಂದು ಕಾಂಗ್ರೆಸ್ ಇರುವುದು ಮಾತ್ರ ವಿಪರ್ಯಾಸ.

ಕನಿಷ್ಠ ಕೆಲವು ರಾಜ್ಯಗಳಲ್ಲಾದರೂ ವಿರೋಧ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗುವ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿಕೊಂಡಿವೆ ಎಂಬುದನ್ನು ಅರಿತಿರುವ ಪ್ರಧಾನಿ ನರೇಂದ್ರ ಮೋದಿ ಈಗಿಂದಲೇ ಮೈತ್ರಿ ಸರಕಾರದ ವೈಫಲ್ಯತೆಯ ಬಗ್ಗೆ ಟೀಕೆ ಮಾಡಲು ಆರಂಭಿಸಿದ್ದಾರೆ. ನೆಹರೂ-ಗಾಂಧಿ ಪರಿವಾರದ ಬಗ್ಗೆ ಎಷ್ಟು ಕಟುವಾಗಿ ಮಾತನಾಡಿದರೂ ಮೋದಿ ಕೂಡಾ ನೆಹರೂ ಮತ್ತು ಇಂದಿರಾ ಗಾಂಧಿಯ ಹೆಜ್ಜೆಗಳನ್ನೇ ಒಮ್ಮೆಮ್ಮೆ ಅನುಸರಿಸುವುದು ಕಾಣಬಹುದಾಗಿದೆ. ಮೈತ್ರಿ ಸರಕಾರದ ಬಗ್ಗೆ ಮೋದಿ ಆಡುತ್ತಿರುವ ಮಾತುಗಳು, ಓರ್ವ ಬಲಿಷ್ಠ ನಾಯಕನನ್ನು ಹೊಂದಿರುವ ಒಂದು ಪಕ್ಷ ದೇಶಕ್ಕೆ ಎಂದಿಗೂ ಒಳಿತು ಎಂದು ಅಂದು ಇಂದಿರಾ ಗಾಂಧಿ ಆಡಿದ ಮಾತುಗಳ ಪುನರಾವರ್ತನೆಯೇ ಆಗಿದೆ. ಇಂದಿರಾ ಗಾಂಧಿಯ ಪುನರಾಗಮನ ಕೇವಲ ಘೋಷವಾಕ್ಯಗಳ ಮೇಲೆ ಅವಲಂಬಿತವಾಗಿರಲಿಲ್ಲ. ಚಿಕ್ಕಮಗಳೂರು ಉಪಚುನಾವಣೆಯ ಗೆಲುವು ಕೂಡಾ ಇಂದಿರಾ ಗಾಂಧಿ ರಾಜಕೀಯ ಪುನರಾಗಮನಕ್ಕೆ ಪ್ರಮುಖ ಎನಿಸಲಿಲ್ಲ. ಅದನ್ನು ಸಾಧ್ಯವಾಗಿಸಿದ್ದು ಜನತಾ ನಾಯಕರು. ಈ ನಾಯಕರು ತಮ್ಮೆಳಗೆಯೇ ಕಚ್ಚಾಡುವ ಮೂಲಕ ಇಂದಿರಾ ಗಾಂಧಿ ರಾಜಕೀಯ ಮರುಜೀವ ಪಡೆಯಲು ನೆರವಾದರು.

ಚಿಕ್ಕಮಗಳೂರು ಕ್ಷೇತ್ರದಿಂದ ಗೆಲುವು ಸಾಧಿಸಿದ ಹದಿನೈದು ದಿನಗಳ ಒಳಗಾಗಿ, ವರ್ಷದ ಹಿಂದೆ ಮಗ ಸಂಜಯ್ ಗಾಂಧಿಯ ಆಟೊಮೊಬೈಲ್ ಕಂಪೆನಿಯ ವ್ಯವಹಾರಗಳ ಬಗ್ಗೆ ನಡೆಸಲಾಗುತ್ತಿದ್ದ ಪ್ರಾಥಮಿಕ ತನಿಖೆಗೆ ತಡೆಯೊಡ್ಡುವ ಮೂಲಕ ಸದನದ ಆದೇಶದ ಉಲ್ಲಂಘನೆ ಮಾಡಿದ ಕಾರಣಕ್ಕೆ ಇಂದಿರಾ ಗಾಂಧಿಯ ಕೆಳಮನೆಯ ಸದಸ್ಯತ್ವವನ್ನು ರದ್ದುಪಡಿಸಿ ಆಕೆಯನ್ನು ಜೈಲಿಗಟ್ಟಲಾಯಿತು. ಕಡಿಮೆ ಅವಧಿಗೆ ಆಕೆ ಜೈಲು ಸೇರಿದರೂ ಅದು ಆಕೆಯ ರಾಜಕೀಯ ಜೀವನದ ಅತ್ಯಂತ ಉತ್ತಮ ಫಲದಾಯಕ ಜೈಲುವಾಸವಾಗಿ ಬದಲಾಯಿತು. 1977ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಆಘಾತಕಾರಿ ಸೋಲನುಭವಿಸಿ ದೇಶದ ಪ್ರಥಮ ಕಾಂಗ್ರೆಸೇತರ ಸರಕಾರ ಅಸ್ತಿತ್ವ ತಾಳಿದ್ದು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಅನಿರೀಕ್ಷಿತ ತಿರುವಾಗಿದ್ದರೆ, ಇಂದಿರಾ ಗಾಂಧಿ ತಮ್ಮ ಪುನರಾಗಮನವನ್ನು ನಿರೂಪಿಸಲು ಪ್ರದರ್ಶಿಸಿದ ಧೈರ್ಯ ಮತ್ತು ಸಾಹಸದ ಕಾರಣದಿಂದಾಗಿ 1978 ಕೂಡಾ ಒಂದು ಮೈಲಿಗಲ್ಲಾಗಿ ಬದಲಾಯಿತು. ಕುಚೋದ್ಯವೆಂದರೆ ಇಂದಿರಾ ಗಾಂಧಿಯ ಎರಡನೇ ಪುನರಾಗಮನ ಜನತಾ ಪಕ್ಷದ ನಾಯಕರು ತೆಗೆದುಕೊಂಡ ದಮನಕಾರಿ ಕ್ರಮಗಳ ಪರಿಣಾಮವಾಗಿರಲಿಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರಾದ ವೈ.ಬಿ. ಚವಾಣ್ ಮತ್ತು ಬ್ರಹ್ಮಾನಂದ ರೆಡ್ಡಿ ಇಂದಿರಾ ಗಾಂಧಿಯ ಬಗ್ಗೆ ತಪ್ಪು ಲೆಕ್ಕಾಚಾರ ಮಾಡಿ ಆಕೆ ಓರ್ವ ರಾಜಕೀಯ ಹೊರೆ ಮತ್ತು ಮುಗಿದು ಹೋದ ಶಕ್ತಿ ಎಂದು ಭಾವಿಸಿದ್ದೇ ಆಕೆ ಮತ್ತಷ್ಟು ಬಲಿಷ್ಠಗೊಂಡು ದೇಶದ ಆಡಳಿತ ವ್ಯವಸ್ಥೆಯ ಮೇಲೆ ಹಿಡಿತ ಸ್ಥಾಪಿಸಲು ಸಾಧ್ಯವಾಯಿತು. ಈ ಇಬ್ಬರು ನಾಯಕರು ಇಂದಿರಾ ಗಾಂಧಿಯ ವಿರುದ್ಧ ತಿರುಗಿಬಿದ್ದು ಆಕೆಯನ್ನು ರಾಜಕೀಯವಾಗಿ ಪ್ರತ್ಯೇಕಗೊಳಿಸಲು ಬಯಸಿದರು. ಆದರೆ ಇದಕ್ಕೆ ಖಡಕ್ ಉತ್ತರ ನೀಡಿದ ಇಂದಿರಾ 1978ರ ಆರಂಭದಲ್ಲಿ ಪಕ್ಷವನ್ನೇ ಇಬ್ಭಾಗ ಮಾಡಿ ತನ್ನ ಬೆಂಬಲಿಗರ ಜೊತೆ ಸೇರಿ ತನ್ನ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಕಾಂಗ್ರೆಸ್ (ಐ) ಎಂಬ ಹೊಸ ಪಕ್ಷವನ್ನೇ ಸ್ಥಾಪಿಸಿದರು.

1978ರ ಫೆಬ್ರವರಿಯಲ್ಲಿ ತನ್ನ ಚುನಾವಣಾ ಅಭಿಯಾನವನ್ನು ಇಂದಿರಾ ಕರ್ನಾಟಕದಲ್ಲಿ ನಡೆದ ಐದನೇ ವಿಧಾನಸಭಾ ಚುನಾವಣೆಯಿಂದಲೇ ಆರಂಭಿಸಿದರು. ಅಂದು ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯ ಕಾಂಗ್ರೆಸ್(ಐ) ಶೇ.44.25 ಮತಗಳನ್ನು ಪಡೆಯುವ ಮೂಲಕ 149 ಸ್ಥಾನಗಳನ್ನು ಗೆದ್ದರೆ ಮೂಲ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಯಿತು. ಜನತಾ ಪಕ್ಷ ಕೇವಲ 59 ಸ್ಥಾನಗಳಲ್ಲಿ ಜಯ ಸಾಧಿಸಿದರೂ ಶೇ. 39.89 ಮತಗಳನ್ನು ಪಡೆದುಕೊಂಡಿತು.

ಅಂದು ಕರ್ನಾಟಕ ಚುನಾವಣೆಯಲ್ಲಿ ಪಕ್ಷಗಳು ಗೆದ್ದ ಸ್ಥಾನಗಳ ಕೂಲಂಕಷ ವಿಶ್ಲೇಷಣೆ ಮಾಡಿದಾಗ ತಿಳಿದುಬಂದ ಅಂಶವೆಂದರೆ, ಕಾಂಗ್ರೆಸ್(ಐ) ರಾಜ್ಯ ರಾಜಕೀಯದ ಶಕ್ತಿಕೇಂದ್ರವಾಗಿ ಬದಲಾಗಿತ್ತು ಮತ್ತು ಕಾಂಗ್ರೆಸ್(ಐ) ವಿರೋಧಿ ಮತಗಳು ಜನತಾ ಪಕ್ಷ ಮತ್ತು ರೆಡ್ಡಿ ಕಾಂಗ್ರೆಸ್ ಮಧ್ಯೆ ವಿಭಜನೆಯಾಗಿತ್ತು. ಚುನಾವಣಾ ಲೆಕ್ಕಾಚಾರದ ಮೂಲವು ಒಂದೇ ಆಗಿರುತ್ತದೆ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ಮತಗಳ ವಿಭಜನೆ ಮತ್ತು ತಮ್ಮ ವಿರುದ್ಧ ಮತಗಳ ಕೇಂದ್ರೀಕರಣವನ್ನು ತಡೆಯಲು ಪ್ರಯತ್ನಿಸುವ ಪರಿಣಾಮವಾಗಿ ಅತ್ಯಂತ ದೊಡ್ಡ ಪಕ್ಷ ಬಹುತೇಕವಾಗಿ ತನ್ನ ನಾಯಕತ್ವ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. 1977ರ ಮಾರ್ಚ್‌ನಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತ ಕೆಲವೇ ತಿಂಗಳ ನಂತರ ಆಕೆ ರಾಜಕೀಯ ಪುನಶ್ಚೇತನ ಪಡೆಯುವ ಪ್ರಕ್ರಿಯೆಗೂ ಚಾಲನೆ ದೊರಕಿತು. ಬಿಹಾರದ ಸಣ್ಣ ಗ್ರಾಮ ಬೆಲ್ಚಿಯಲ್ಲಿ ಕುರ್ಮಿ ನೇತೃತ್ವದ ತಂಡ ಎಂಟು ದಲಿತರೂ ಸೇರಿದಂತೆ ಹನ್ನೊಂದು ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿತ್ತು. ಇಂದಿರಾ ಗಾಂಧಿ ಆ ಪ್ರದೇಶಕ್ಕೆ ಮಧ್ಯರಾತ್ರಿಯಲ್ಲಿ ಆನೆಯ ಮೇಲೆ ಕುಳಿತು ಭೇಟಿ ನೀಡುವ ಮೂಲಕ ಟಿವಿ ಇರದ ಆ ಕಾಲದಲ್ಲೂ ಇಡೀ ದೇಶದಲ್ಲಿ ಒಂದು ಸೆನ್ಶೇಶನ್ ಸೃಷ್ಟಿಸಿದ್ದರು.

ಇದರ ಛಾಯಾಚಿತ್ರಗಳು ಅನೇಕ ಸಮಯದವರೆಗೆ ಭಾರತೀಯರನ್ನು ಮೂಕವಿಸ್ಮಿತಗೊಳಿಸಿತ್ತು. ಜೊತೆಗೆ ಇಂದಿರಾ ಗಾಂಧಿ ಕುರಿತು ಸ್ಥಳೀಯರು ಕೂಗಿದ್ದ ಘೋಷಣೆ, ‘‘ಅರ್ಧ ರೊಟ್ಟಿ ತಿನ್ನುತ್ತೇವೆ, ಇಂದಿರಾ ಗಾಂಧಿಯನ್ನು ಕರೆಯುತ್ತೇವೆ’’ (‘‘ಆದ ರೋಟಿ ಕಾಯೇಂಗೆ, ಇಂದಿರಾ ಕೊ ಬುಲಾಯೇಂಗೆ’’) ಅಥವಾ ಇಂದಿರಾ, ‘‘ನಿಮ್ಮ ಅನುಪಸ್ಥಿತಿಯಲ್ಲಿ ದಲಿತರನ್ನು ಹತ್ಯೆ ಮಾಡಲಾಗುತ್ತಿದೆ’’ (‘‘ಇಂದಿರಾ, ತೇರೆ ಅಭಾವೊಮೆ ಹರಿಜನ್ ಮಾರೆ ಜಾತೆ ಹೇ’’) ಮುಂತಾದುವುಗಳ ಬಗ್ಗೆ ವೌಖಿಕ ಕತೆಗಳು ಸೃಷ್ಟಿಯಾಗಿದ್ದವು. ಕೇವಲ ಆರು ತಿಂಗಳ ಹಿಂದೆ ತಿರಸ್ಕರಿಸಿದ್ದ ಜನರ ಮನದಲ್ಲಿ ಇಂದಿರಾ ಗಾಂಧಿ ಮತ್ತೆ ಸ್ಥಾನ ಪಡೆದುಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ಮತ್ತೆ ಹಿಡಿತ ಸಾಧಿಸುವುದು ಮತ್ತು ಚುನಾವಣಾ ಆಧಿಪತ್ಯವನ್ನು ಸ್ಥಾಪಿಸುವುದಷ್ಟೇ ಬಾಕಿಯುಳಿದಿತ್ತು. ಇದಕ್ಕೆ ಮುನ್ನುಡಿ ಬರೆದಿದ್ದು 1978 ಜನವರಿಯ ಒಂದು ಆಹ್ಲಾದಕರವಾದ ಮಧ್ಯಾಹ್ನದ ಹೊತ್ತು ಸಂಸತ್‌ನಿಂದ ಸುಮಾರು ನೂರು ಅಡಿ ದೂರವಿರುವ ಮಾವ್ಲಂಕರ್ ಭವನದ ಹೊರಗೆ ಇರುವ ಹಸಿರು ಆವರಣದಲ್ಲಿ. ಕಾಂಗ್ರೆಸ್ ಎರಡು ಹೋಳಾಗಿ ಒಡೆದು ಹೋಗಿ ಕೇವಲ 54 ಲೋಕಸಭಾ ಸದಸ್ಯರ ಬೆಂಬಲದೊಂದಿಗೆ ಇಂದಿರಾ ಕಾಂಗ್ರೆಸ್ ಜನ್ಮ ತಳೆದಿತ್ತು. ನೂರಕ್ಕೂ ಅಧಿಕವಿದ್ದ ಇತರರು ಇಂದಿರಾ ಗಾಂಧಿಯ ಸಾಮರ್ಥ್ಯದ ಬಗ್ಗೆ ಅನುಮಾನಪಟ್ಟರು. ಆದರೆ ಅದಕ್ಕಾಗಿ ಅವರು ಪಶ್ಚಾತ್ತಾಪಪಡುವ ದಿನಗಳು ದೂರವಿರಲಿಲ್ಲ. ವರ್ಷದ ಉಳಿದ ದಿನಗಳು ಪಕ್ಷಕ್ಕೆ ರೂಪ ನೀಡುವಲ್ಲಿ ಮತ್ತು ಸಂಘಟನೆಯಲ್ಲಿ ಕಳೆದು ಹೋಯಿತು.

ಜೊತೆಗೆ ಪಕ್ಷದ ಐತಿಹಾಸಿಕ ಚುನಾವಣಾ ಚಿಹ್ನೆ ಕೈಯನ್ನು ಪಡೆಯುವ ಕಾರ್ಯವೂ ಸಫಲವಾಯಿತು. ನಾಲ್ಕು ದಶಕಗಳ ಹಿಂದೆ ಇಂದಿರಾ ಗಾಂಧಿ ಪ್ರದರ್ಶಿಸಿದ್ದ ಬದ್ಧತೆ ಮತ್ತು ಪರಿಶ್ರಮ ರಾಜಕೀಯ ಪುನಶ್ಚೇತನ ಪಡೆಯಲು ಪ್ರಯತ್ನಿಸುವ ಪ್ರತಿಯೊಬ್ಬನಿಗೂ ಪಾಠವಾಗಿದೆ. ಜಾಣತನ, ಕುಶಾಗ್ರಮತಿ ಮತ್ತು ಸಮೂಹವನ್ನು ಮನರಂಜಿಸುವ ಸಾಮರ್ಥ್ಯ ಇವುಗಳು ಅಧಿಕಾರವನ್ನು ಕಳೆದುಕೊಂಡ ಮೂರು ವರ್ಷಗಳ ಒಳಗಾಗಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೇರಲು ಪ್ರಮುಖ ಕಾರಣಗಳಾಗಿವೆ. ಅದರೆ ಅವೆಲ್ಲದಕ್ಕೂ ಮಿಗಿಲಾಗಿ ನಿರಂತರ ಶ್ರಮಪಡುವ ಆಕೆಯ ಸಾಮರ್ಥ್ಯ ಆಕೆಗೆ ಬೆನ್ನೆಲುಬಾಗಿ ನಿಂತಿತ್ತು. ಭಾರತವು ಚುನಾವಣಾ ಹೊಸ್ತಿಲಲ್ಲಿ ನಿಂತಿರುವ ಕಾರಣ, 1978ರ ಇಂದಿರಾ ಪುನರಾಗಮನ ಆಡಳಿತಾರೂಢ ಮತ್ತು ಪ್ರತಿಪಕ್ಷಕ್ಕೆ ಪಾಠವಾಗಿದೆ. ಆಕೆಗಾದರೂ ಜನತಾ ಪಕ್ಷದ ಆತ್ಮಹತ್ಯಾ ಪ್ರವೃತ್ತಿಗಳಿಂದ ರಾಜಕೀಯ ಪುನರಾಗಮನ ಸುಲಭವಾಗಿತ್ತು. ಆದರೆ ಅಂಥ ಯಾವುದೇ ಸಾಧ್ಯತೆಗಳ ಸಣ್ಣ ಸುಳಿವೂ ಇಲ್ಲದ ಈ ಸಂದರ್ಭದಲ್ಲಿ, ಮುಂದಿನ ವರ್ಷ ಭಾರತವು ದೇಶದ ಇತಿಹಾಸದಲ್ಲೇ ಅತ್ಯಂತ ಕುತೂಹಲ ಮೂಡಿಸಿರುವ ಚುನಾವಣೆ ಮತ್ತು ರಾಜಕೀಯ ಸಮರಕ್ಕೆ ಸಾಕ್ಷಿಯಾಗಲಿದೆ.

ಕೃಪೆ: thewire.in

Writer - ನೀಲಾಂಜನ್ ಮುಖೋಪಾಧ್ಯಾಯ್

contributor

Editor - ನೀಲಾಂಜನ್ ಮುಖೋಪಾಧ್ಯಾಯ್

contributor

Similar News