ಹೊಸ ಬಜೆಟ್ ಮಂಡನೆ ಕುರಿತು ಅಧಿಕಾರಿಗಳೊಂದಿಗೆ ಶೀಘ್ರವೇ ಸಮಾಲೋಚನೆ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಜೂ.2: ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಹೊಸ ಬಜೆಟ್ ಮಂಡನೆ ಕುರಿತಂತೆ ಮೂರು ಅಥವಾ ನಾಲ್ಕು ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಂಪುಟ ವಿಸ್ತರಣೆಯ ನಂತರ ಹೊಸ ಸರಕಾರದ ಧ್ಯೇಯೋದ್ದೇಶ ಕುರಿತಂತೆ ಜಂಟಿ ಅಧಿವೇಶನದ ಸಿದ್ಧತೆ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಿದರು.
ರಾಜ್ಯ ಆಯವ್ಯಯದ ಲೇಖಾನುದಾನದ ಅವಧಿ ಜುಲೈ 31ಕ್ಕೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಹಿಂದಿನ ಸರಕಾರ ಘೋಷಿಸಿದ್ದ ಹಲವಾರು ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಮುಂದುವರೆಸುವುದರ ಜೊತೆಗೆ ಸಮ್ಮಿಶ್ರ ಸರಕಾರದ ಹೊಸ ಯೋಜನೆಗಳೂ ಹಾಗೂ ನೂತನ ಕಾರ್ಯಕ್ರಮಗಳನ್ನು ಹೊಸ ಬಜೆಟ್‌ನಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಕೇಂದ್ರ ಸರಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಕುರಿತಂತೆ ಗೆಜೆಟ್ ಅಧಿಸೂಚನೆ ಹೊರಡಿಸಿರುವುದರಿಂದ ರಾಜ್ಯಕ್ಕೆ ಆಗುವ ಅನುಕೂಲ ಅಥವಾ ಅನನುಕೂಲದ ಬಗ್ಗೆ ಕಾನೂನು ಹಾಗೂ ಜಲಸಂಪನ್ಮೂಲ ತಜ್ಞರೊಂದಿಗೆ ಹಾಗೂ ಎಲ್ಲ ನಾಯಕರೊಂದಿಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸಮ್ಮಿಶ್ರ ಸರಕಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ನೀತಿಯನ್ನು ಅನುಸರಿಸಬೇಕಾಗುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೆ ಖಾತೆಗಳ ಹಂಚಿಕೆ ಕುರಿತಂತೆ ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ವರಿಷ್ಠರು ತೆಗೆದುಕೊಂಡಿರುವ ನಿರ್ಣಯದಂತೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಸಮಾಲೋಚಿಸಿ ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹಮತ ಪಡೆದು ಖಾತೆಗಳ ಹಂಚಿಕೆ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಅವರು ಹೇಳಿದರು.
ದೇವೇಗೌಡರ ಹಸ್ತಪಕ್ಷೇಪವಿಲ್ಲ: ಮುಖ್ಯಮಂತ್ರಿಯಾಗಿ ತಾನು ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗಲಿ ಎಂದು ಹಣಕಾಸು ಖಾತೆಗೆ ಬೇಡಿಕೆ ಇಟ್ಟಿದ್ದು ನಿಜ. ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಇಂಧನ ಖಾತೆಗೆ ಆಸೆ ಪಟ್ಟಿದ್ದರು. ಈ ಹಿಂದೆ ಅದೇ ಖಾತೆಯನ್ನು ನಿರ್ವಹಿಸಿದ ಅನುಭವವಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಹಿರಿಯ ಮುಖಂಡ ಎಚ್.ಡಿ.ರೇವಣ್ಣ ಅವರೂ ಅದೇ ಖಾತೆಗೆ ಒತ್ತಾಯಿಸಿದ್ದರು ಎಂದು ಕುಮಾರಸ್ವಾಮಿ ತಿಳಿಸಿದರು.
ಆದರೆ, ಸಂಪುಟ ರಚನೆ ಹಾಗೂ ಖಾತೆ ಹಂಚಿಕೆಯ ವಿಷಯದಲ್ಲಿ ತಮ್ಮ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಯಾವುದೇ ಹಸ್ತಕ್ಷೇಪವೂ ಮಾಡಿಲ್ಲ, ಯಾವುದೇ ಮಾಸ್ಟರ್ ಪ್ಲಾನ್ ಕೂಡಾ ಮಾಡಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಣೆ ನೀಡಿದರು.
ಖಾತೆ ಹಂಚಿಕೆ ಕುರಿತು ಜಟಾಪಟಿ ಇಲ್ಲ: ಕಾಂಗ್ರೆಸ್ ನಾಯಕರು ಅತ್ಯುತ್ತಮ ಪಟ್ಟಿ ಸಿದ್ಧಪಡಿಸಿದ್ದಾರೆ. ಅದಕ್ಕೆ ನಮ್ಮ ಪಕ್ಷದ ವರಿಷ್ಠರೂ ಸ್ಪಂದಿಸಿ ಸಮ್ಮತಿಸಿದ್ದಾರೆ. ಖಾತೆ ಹಂಚಿಕೆ ಕುರಿತಂತೆ ಯಾವುದೇ ಜಟಾಪಟಿ ನಡೆದಿಲ್ಲ. ಮಾಧ್ಯಮದವರು ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಬಾರದು. ಊಹಾಪೋಹದ ಸುದ್ದಿಗಳು ಹಾಗೂ ಕಪೋಲಕಲ್ಪಿತ ವರದಿಗಳು ಬೇಡ ಎಂದು ಅವರು ಮನವಿ ಮಾಡಿದರು.
ಮಂತ್ರಿಮಂಡಲ ವಿಸ್ತರಣೆ: ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಯಾರು ಸೇರ್ಪಡೆಯಾಗಬೇಕು? ಎಂಬ ಹೆಸರುಗಳೇ ಇನ್ನೂಅಂತಿಮಗೊಂಡಿಲ್ಲ. ಆದರೆ, ಪಕ್ಷಗಳಿಗೆ ಖಾತೆ ಹಂಚಿಕೆಯಾಗಿದೆ. ಮಂತ್ರಿ ಮಂಡಲ ವಿಸ್ತರಣೆಯಾದ ನಂತರವೇ ಯಾರಿಗೆ ಯಾವ ಖಾತೆ ಎಂಬುದು ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು.