ಆಶ್ರಮ ಬಂದ್ ಮಾಡಿ, ನಿಷ್ಪಕ್ಷಪಾತ ತನಿಖೆ ಮಾಡಿ: ಎಚ್.ಎಸ್.ದೊರೆಸ್ವಾಮಿ

Update: 2018-06-02 12:59 GMT

ಬೆಂಗಳೂರು, ಜೂ.2: ಮೈಸೂರಿನ ಅವಧೂತ ದತ್ತ ಪೀಠಮ್‌ನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ರಾಜ್ಯ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಆಶ್ರಮವನ್ನು ಬಂದ್ ಮಾಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅವಧೂತ ದತ್ತ ಆಶ್ರಮದ ಶಾಖೆಗಳಿವೆ. ಎಲ್ಲಾ ಶಾಖೆಗಳ ಆಶ್ರಮದಲ್ಲಿ ಮದುವೆಯಾಗದ ಹೆಣ್ಣು ಮಕ್ಕಳನ್ನು ಅಕ್ರಮವಾಗಿಟ್ಟುಕೊಳ್ಳಲಾಗಿದೆ. ದತ್ತ ಪೀಠಮ್‌ನ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ವಿದೇಶಿ ಸಂಸ್ಕೃತಿಗೆ ಮಣೆ ಹಾಕುತ್ತಿದ್ದಾರೆ. ಹಿಂದೂ ಧರ್ಮದ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕೃತಿಗೆ ಮಸಿ ಬಳಿಯಲಾಗುತ್ತಿದೆ ಎಂದು ದೂರಿದರು.

ಆಶ್ರಮದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳನ್ನು ಅಸಭ್ಯವಾಗಿ ಬಿಂಬಿಸುವುದು, ಸಂಬೋಧಿಸುವುದು ನಡೆಯುತ್ತಿದೆ. ಜನರ ಧಾರ್ಮಿಕ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಇಂತಹ ಸ್ವಾಮೀಜಿ ಹಾಗೂ ಆಶ್ರಮಗಳ ವಿರುದ್ಧ ರಾಜ್ಯ ಸರಕಾರ ಈ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿರುದ್ಧ ಹಿಂದೆಯೂ ಹಲವು ದೂರು ದಾಖಲಾಗಿವೆ. ರಾಜಕೀಯ ಒತ್ತಡದಿಂದ ಆಶ್ರಮದಲ್ಲಿನ ಅನ್ಯಾಯಗಳನ್ನು ಮರೆಮಾಚಲಾಗುತ್ತಿದೆ. ಲೋಕಾಯುಕ್ತರಾದ ಭಾಸ್ಕರ್‌ರಾವ್ ಇದ್ದಾಗ ಸ್ವಾಮೀಜಿಯ ಅಕ್ರಮಗಳ ವಿರುದ್ಧ ದೂರು ನೀಡಲಾಗಿತ್ತು. ಆದರೆ, ಸಲ್ಲಿಸಿದ ಕೂಡಲೇ ಅದನ್ನು ವಜಾ ಮಾಡಿದರು. ಅಧಿಕಾರಿಗಳು ಸಹ ಆಶ್ರಮದ ಅಕ್ರಮಗಳಲ್ಲಿ ಶಾಮೀಲಾಗಿದ್ದಾರೆ. ಹಾಗಾಗಿ ದೂರು ನೀಡಿದರೂ ಅದನ್ನು ಪರಿಗಣಿಸುತ್ತಿಲ್ಲ ಎಂದು ದೂರಿದರು.

ಹೈಕೋರ್ಟ್ ವಕೀಲ ಎಸ್.ಎಸ್.ರವಿಶಂಕರ್ ಮಾತನಾಡಿ, ಸಮಾಜದಲ್ಲಿ ಒಬ್ಬ ಸ್ವಾಮೀಜಿಯಾಗಲು ಇಂತಹದ್ದೇ ಎಂಬ ಯಾವ ಮಾನದಂಡವೂ ಇಲ್ಲ. ಇದರಿಂದ ಹಿಂದೂ ಧಾರ್ಮಿಕತೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ಭೋಗ ಜೀವನ ನಡೆಸುವಂತಾಗಿದೆ. ಅವಧೂತ ಆಶ್ರಮದ ವಿರುದ್ಧ ಕಳೆದ ಹತ್ತು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಶ್ರಮದಲ್ಲಿ ಮೂರು ಮಂದಿ ಏಡ್ಸ್‌ನಿಂದ ಸತ್ತರೂ ಅದರ ಬಗ್ಗೆ ತನಿಖೆಯಾಗಿಲ್ಲ. ಆದರೆ, ಕುಟುಂಬವರಿಗೆ ಇಂತಿಷ್ಟು ಹಣ ನೀಡಿ ಬಾಯಿ ಮುಚ್ಚಿಸಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ ರೆಡ್ಡಿ, ಸ್ವಾಮೀಜಿಯಿಂದ ಅನ್ಯಾಯಕ್ಕೆ ಒಳಗಾದ ಶ್ರೀರಾಮ್‌ಕೃಷ್ಣ, ವಕೀಲ ರಾಘವೇಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News