ಬೆಂಗಳೂರು: ಉದ್ಯಮಿ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

Update: 2018-06-02 13:06 GMT

ಬೆಂಗಳೂರು, ಜೂ.2: ಉದ್ಯಮಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಹೊಸೂರು ರಸ್ತೆಯಲ್ಲಿ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಫಾರ್ಮ್ ಇಂಡಿಯಾ ಇಂಪೆಕ್ಸ್ ಕಂಪೆನಿಯ ಮಾಲಕ ಕನ್ನಯ್ಯ ಲಾಲ್ ಮೇಲೆ ಗುಂಡಿನ ದಾಳಿ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಕಾಏಕಿ ಸಿಡಿದ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೂಡಲೆ ಅವರನ್ನು ಸೆಂಟ್‌ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ

ಘಟನೆ: ಶನಿವಾರ ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ಮೂರು ಮಂದಿಯಿದ್ದ ದುಷ್ಕರ್ಮಿಗಳ ತಂಡವು ಕೋರಮಂಗಲದ ರಹೇಜಾ ಅರ್ಕೇಡ್‌ನಲ್ಲಿರುವ ಫಾರ್ಮ್ ಇಂಡಿಯಾ ಇಂಪೆಕ್ಸ್ ಕಂಪೆನಿಗೆ ನುಗ್ಗಿ ಕನ್ನಯ್ಯ ಲಾಲ್ ಮೇಲೆ ದಿಢೀರ್ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಕೋರಮಂಗಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ನೇಮಕ ಮಾಡಲಾಗಿದೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News