ಸಚಿವ ಸ್ಥಾನಕ್ಕಾಗಿ ಉಭಯ ಪಕ್ಷಗಳಲ್ಲಿ ತೀವ್ರ ಪೈಪೋಟಿ

Update: 2018-06-02 13:09 GMT

ಬೆಂಗಳೂರು, ಜೂ.2: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಎರಡು ಪಕ್ಷಗಳ ನಡುವೆ ಶುಕ್ರವಾರ ಅಧಿಕೃತವಾಗಿ ಖಾತೆಗಳ ಹಂಚಿಕೆಯಾಗುತ್ತಿದ್ದಂತೆಯೇ ಸಂಪುಟ ಸೇರ್ಪಡೆಗೆ ತೀವ್ರ ಪೈಪೋಟಿ ಎದುರಾಗಿದೆ.

ಕಾಂಗ್ರೆಸ್ ಪಕ್ಷದಿಂದ ಮಂತ್ರಿ ಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಬೇಕು ಎಂಬುದನ್ನು ಅಂತಿಮಗೊಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೊಸದಿಲ್ಲಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ವಿದೇಶ ಪ್ರವಾಸದಿಂದ ಇವತ್ತು ಹಿಂದಿರುಗುತ್ತಿರುವುದರಿಂದ ನಾಳೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿ ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಅದೇ ರೀತಿ ಜೆಡಿಎಸ್ ಪಕ್ಷದ ಶಾಸಕರು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಜೊತೆಯಲ್ಲಿ ಪಕ್ಷೇತರ ಸದಸ್ಯರಾದ ನಾಗೇಶ್, ಆರ್.ಶಂಕರ್ ಹಾಗೂ ಬಿಎಸ್ಪಿ ಶಾಸಕ ಎನ್.ಮಹೇಶ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ರೋಷನ್‌ ಬೇಗ್, ತನ್ವೀರ್‌ಸೇಠ್, ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಸೇರಿದಂತೆ ಇನ್ನಿತರರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಇದಲ್ಲದೆ, ಸತೀಶ್ ಜಾರಕಿಹೊಳಿ, ದಿನೇಶ್‌ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ರೂಪಾ ಶಶಿಧರ್, ಶಿವಾನಂದ ಪಾಟೀಲ್, ಸಿ.ಎಸ್.ಶಿವಳ್ಳಿ, ಯಶವಂತರಾವ್ ಪಾಟೀಲ್, ಪುಟ್ಟರಂಗ ಶೆಟ್ಟಿ ಸೇರಿದಂತೆ ಇನ್ನಿತರರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಜೆಡಿಎಸ್‌ನಲ್ಲಿ ಹಿರಿಯ ಶಾಸಕರಾದ ಎಚ್.ಡಿ.ರೇವಣ್ಣ, ಬಸವರಾಜ ಹೊರಟ್ಟಿ, ಎಚ್.ವಿಶ್ವನಾಥ್, ಸಿ.ಎಸ್.ಪುಟ್ಟರಾಜು, ಜಿ.ಟಿ.ದೇವೇಗೌಡ, ಬಿ.ಎಂ.ಫಾರೂಕ್, ಬಂಡೆಪ್ಪ ಕಾಶೆಂಪೂರ್, ಎ.ಟಿ.ರಾಮಸ್ವಾಮಿ, ಎಚ್.ಕೆ.ಕುಮಾರಸ್ವಾಮಿ ಸಚಿವರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಜೊತೆಗೆ ಶ್ರೀನಿವಾಸಗೌಡ, ಕೆ.ಗೋಪಾಲಯ್ಯ, ಕೆ.ಎಂ.ಶಿವಲಿಂಗೇಗೌಡ ಕೂಡ ಸಂಪುಟ ಸೇರ್ಪಡೆಗೆ ಪ್ರಯತ್ನ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News